5 ಕೋಟಿಯಲ್ಲಿ ಶತಮಾನೋತ್ಸವ ಭವನ ಪೂರ್ಣ

ಗದಗ: ಒಂದೂವರೆ ವರ್ಷದಲ್ಲಿ ಸರ್ಕಾರದ 5 ಕೋಟಿ ರೂ.ನಲ್ಲಿ ಶತಮಾನೋತ್ಸವ ಭವನ ಪೂರ್ಣಗೊಳಿಸಿದ್ದೇವೆ. 14 ಜಿಲ್ಲೆಗಳಲ್ಲಿ ಹಳೆಗನ್ನಡ ಹಾಗೂ ಶಾಸ್ತ್ರೀಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಮನು ಬಳಿಗಾರ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯಭವನದಲ್ಲಿ ಗುರುವಾರ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಕಲ ಸದಸ್ಯರ 102ನೇ ವಾರ್ಷಿಕ ಅಧಿವೇಶನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಸಾಪ ಹೊರತಂದ 1500ಕ್ಕೂ ಹೆಚ್ಚು ಗ್ರಂಥಗಳ ಪೈಕಿ 150 ಗ್ರಂಥಗಳು, ನಿಘಂಟುಗಳನ್ನು ಕೇಂದ್ರೀಯ ಭಾಷಾ ಸಂಸ್ಥಾನ ಸಂಸ್ಥೆ ಸಹಯೋಗದಲ್ಲಿ ಗಣಕೀಕರಣ ಕಾರ್ಯ ಮಾಡಲಾಗುತ್ತಿದೆ. ನೇಪಾಳ ಭಾಷಾ ಸಂಸ್ಕೃತಿ ಸಂಘದ ಒಪ್ಪಂದದೊಂದಿಗೆ ಕನ್ನಡ, ನೇಪಾಳಿ ಭಾಷೆಯ ತಲಾ 50 ಕವನಗಳನ್ನು ಭಾಷಾಂತರಿಸಲಾಗುತ್ತಿದೆ ಎಂದರು.

ಹೊರನಾಡ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ

ದಲಿತ ಸಾಹಿತಿಗಳ ಸಾಹಿತ್ಯ, ಕಥೆ, ಕಾವ್ಯ, ಕಾದಂಬರಿ, ವಿಮರ್ಶೆ, ಜಾನಪದ, ನಾಟಕಗಳ ಕುರಿತ ಸಂಪುಟಗಳನ್ನು ನಾಲ್ಕು ತಿಂಗಳೊಳಗೆ ಹೊರತರಲಾಗುತ್ತಿದೆ. ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡುತ್ತಿರುವ ಹೊರನಾಡ ಕನ್ನಡಿಗರ ಮಕ್ಕಳಿಗೆ ಕೆಪಿಎಸ್​ಸಿ ಉದ್ಯೋಗದಲ್ಲಿ ಶೇ. 5ರಷ್ಟು ಮೀಸಲಾತಿ ಒದಗಿಸುವಂತೆ ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಅವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಪ್ರತಿಭೆ, ಸಾಮಾಜಿಕ, ಪ್ರಾದೇಶಿಕ, ಲಿಂಗ ಸಮಾನತೆಯನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಸಾಹಿತ್ಯ ಪರಿಷತ್ 103 ವರ್ಷಗಳಿಂದ ಪಾರದರ್ಶಕ, ಪ್ರಾಮಾಣಿಕ, ಜಾತ್ಯತೀತವಾಗಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು.

ವಾರ್ಷಿಕ ವರದಿ ಮಂಡನೆ

ಕಸಾಪ ಗೌರವಾಧ್ಯಕ್ಷ ವ.ಚ. ಚನ್ನೇಗೌಡ ಅವರು 2017-18ನೇ ಸಾಲಿನ ವಾರ್ಷಿಕ ವರದಿ, ಆಯವ್ಯಯದ ಬಗ್ಗೆ ಲೆಕ್ಕಪರಿಶೋಧಕರು ಪರಿಶೀಲಿಸಿದ ಲೆಕ್ಕಪಟ್ಟಿಗಳನ್ನು ಅಂಗೀಕರಿಸುವುದು. 2018-19ನೇ ಸಾಲಿನ ವಾರ್ಷಿಕ ಆಯವ್ಯಯ ಅಂದಾಜು ಪಟ್ಟಿ ಅಂಗೀಕರಿಸುವುದು. ಕಾರ್ಯಕಾರಿಣಿ ಸಮಿತಿ ಸೂಚನೆಗಳು, ಸದಸ್ಯರು ನಿಯಮಾನುಸಾರ ಸಲ್ಲಿಸಿದ ಕಾರ್ಯಸೂಚಿಗಳನ್ನು ಮಂಡಿಸಿದರು. ಕಸಾಪ ಸದಸ್ಯರು ಸೂಚಿಸಿ, ಅನುಮೋದಿಸಿದರು.

ಗೊರವರಗೆ ಕುಮಾರಿ ಜ್ಯೋತಿ ದತ್ತಿ ಪ್ರಶಸ್ತಿ

ಪ್ರಸಕ್ತ ವರ್ಷ ಅಗಲಿದ ಕಸಾಪ ಸದಸ್ಯರು, ಹಿರಿಯ ಸಾಹಿತಿಗಳು, ಕನ್ನಡ ನಾಡಿಗೆ ಸೇವೆ ಸಲ್ಲಿಸಿದವರಿಗೆ 2 ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಯುವ ಸಾಹಿತಿ ಟಿ.ಎಸ್. ಗೊರವರ ಅವರಿಗೆ ಕುಮಾರಿ ಜ್ಯೋತಿ ದತ್ತಿ ಪ್ರಶಸ್ತಿ ನೀಡಲಾಯಿತು. ದಿ. ಕೆ.ಬಿ. ಚಂದ್ರ ಅವರ ಮೀನಾಕ್ಷಿ ದತ್ತಿಯಡಿ ಸಿಹಿ ವಿತರಿಸಲಾಯಿತು.

ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ ಮಾತನಾಡಿದರು. ಸಾಹಿತಿಗಳಾದ ಚಂದ್ರಶೇಖರ ಪಾಟೀಲ, ಬಿ.ಟಿ. ಲಲಿತಾನಾಯಕ, ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ವಸುಂಧರಾ ಭೂಪತಿ, 30 ಜಿಲ್ಲೆಗಳ ಕಸಾಪ ಜಿಲ್ಲಾಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು. ಕಲಾವಿದೆ ಉಷಾ ಕಾರಂತ ಅವರು ನಾಡಗೀತೆ ಪ್ರಸ್ತುತಪಡಿಸಿದರು. ನಾರಾಯಣ ಹಿರೇಕೊಳಚಿ ಸಂಗೀತ ಪ್ರಸ್ತುತಪಡಿಸಿದರು. ಕಸಾಪ ಜಿಲ್ಲಾಧ್ಯಕ್ಷ ಶರಣು ಗೋಗೇರಿ ಸ್ವಾಗತಿಸಿದರು. ಬಾಹುಬಲಿ ಜೈನರ ನಿರೂಪಿಸಿದರು. ವಿವೇಕಾನಂದಗೌಡ ಪಾಟೀಲ ವಂದಿಸಿದರು.

ಕಸಾಪದ ಸಕಲ ಸದಸ್ಯರ 102ನೇ ವಾರ್ಷಿಕಾಧಿವೇಶನಕ್ಕೂ ಮುನ್ನ ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಹಿರಿಯ ಸಾಹಿತಿಗಳ ಉಪಸ್ಥಿತಿಯಲ್ಲಿ ಕಾರ್ಯಕಾರಿಣಿ ಸಭೆ ಜರುಗಿತು. ಈ ಸಂದರ್ಭದಲ್ಲಿ 84ನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ, ಸರ್ವಾಧ್ಯಕ್ಷರ ಆಯ್ಕೆ ಕುರಿತು ಎರಡು ಗಂಟೆ ವಿಸõತ ಚರ್ಚೆ ನಡೆಯಿತು.