ಹಾಕಿ ಲೀಗ್‌ನಲ್ಲಿ 4 ತಂಡಕ್ಕೆ ಗೆಲುವು

ಪೊನ್ನಂಪೇಟೆ: ಹಾಕಿ ಕೂರ್ಗ್ ವತಿಯಿಂದ ಇಲ್ಲಿನ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ‘ಎ’ ಡಿವಿಜನ್ ಹಾಕಿ ಲೀಗ್‌ನ 4ನೇ ದಿನವಾದ ಭಾನುವಾರದ ಪಂದ್ಯಾವಳಿಯಲ್ಲಿ 4 ತಂಡ ಗೆಲುವು ಸಾಧಿಸಿದ್ದು, 2 ತಂಡಗಳ ನಡುವಿನ ಸಮಬಲದ ಹೋರಾಟದಿಂದ 1 ಪಂದ್ಯ ಟೈನಲ್ಲಿ ಅಂತ್ಯಗೊಂಡಿತು.
ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್, ನಾಪೋಕ್ಲು ಶಿವಾಜಿ, ಪೊದ್ದ್‌ಮಾನಿ ಬ್ಲೂಸ್ಟಾರ್, ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡ ಗೆಲುವು ಪಡೆದವು. ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಮರ್ಕರಾ ಯುನೈಟೆಡ್ ನಡುವಿನ ಪಂದ್ಯಾ ಡ್ರಾದಲ್ಲಿ ಅಂತ್ಯವಾಯಿತು.

ಭಾನುವಾರದ ಹೈಲೆಟ್ಸ್: 1 ಪಂದ್ಯ ಡ್ರಾದಲ್ಲಿ ಅಂತ್ಯವಾದರೆ, ಕ್ರೀಡಾ ತರಬೇತಿ ವಸತಿ ಶಾಲೆ ತಂಡಗಳಾದ ಕೂಡಿಗೆ ಹಾಗೂ ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡಗಳಿಗೆ ಗೆಲುವು, ಯುಎಸ್‌ಸಿ ಬೇರಳಿನಾಡ್‌ಗೆ 2ನೇ ಸೋಲು, ಮರ್ಕರಾ ಪ್ರತಿಕ್ 2 ಗೋಲು, ಪೊದ್ದ್‌ಮಾನಿ ಬ್ಲೂಸ್ಟಾರ್ 6 ಗೋಲುಗಳ ದಾಖಲೆ, ಪೊದ್ದ್‌ಮಾನಿಯ ಉತ್ತಯ್ಯ ಹಾಗೂ ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ಗೌತಂ ತಲಾ 2 ಗೋಲು ದಾಖಲಿಸಿದರು.

ಫಲಿತಾಂಶ: ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡ ಯುಎಸ್‌ಸಿ ಬೇರಳಿನಾಡ್ ತಂಡವನ್ನು 4-0 ಗೋಲುಗಳಿಂದ ಮಣಿಸಿತು. ಕೂಡಿಗೆ ಪರ 17ನೇ ನಿಮಿಷದಲ್ಲಿ ದೀಕ್ಷಿತ್, 25ರಲ್ಲಿ ಯಶ್ವಂತ್, 30ರಲ್ಲಿ ಕಿರಣ್, 44ರಲ್ಲಿ ರೋಹಿತ್ ತಲಾ ಒಂದೊಂದು ಗೋಲು ಬಾರಿಸಿ ಗೆಲುವಿನ ನಗೆ ಬೀರಲು ಕಾರಣಕರ್ತರಾದರು.

ಶಿವಾಜಿ ತಂಡ ಬಲಮುರಿ ತಂಡದ ಎದುರು 4-0 ಗೋಲುಗಳ ಜಯ ಸಾಧಿಸಿತು. ಶಿವಾಜಿ ಪರ 14ನೇ ನಿಮಿಷದಲ್ಲಿ ಪೆಮ್ಮಯ್ಯ, 17ರಲ್ಲಿ ಶುಭಂ, 21ರಲ್ಲಿ ಬಿಪಿನ್, 28ರಲ್ಲಿ ವಿಕಾಸ್ ತಲಾ ಒಂದೊಂದು ಗೋಲು ಹೊಡೆದರು. ಪೊದ್ದ್‌ಮಾನಿ ಬ್ಲೂಸ್ಟಾರ್ ತಂಡ ಡಾಲ್ಫಿನ್ಸ್ ತಂಡವನ್ನು 6-0 ಗೋಲುಗಳಿಂದ ಮಣಿಸಿ ಸಂಚಲನ ಮೂಡಿಸಿತು. ಉತ್ತಯ್ಯ 2 ಗೋಲು (15 ಹಾಗೂ 45ನೇ ನಿ.) ಹೊಡೆದು ಮಿಂಚಿದರು. 9ನೇ ನಿಮಿಷದಲ್ಲಿ ಮಾಚಯ್ಯ, 24ರಲ್ಲಿ ಮಧು, 42ರಲ್ಲಿ ಹರ್ಷಿತ್, 50ರಲ್ಲಿ ವಿಶಾಲ್ ಗೋಲು ಹೊಡೆದರು.

ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡ ಚಾರ್ಮರ್ಸ್ ವಿರುದ್ಧ 2-1 ಗೋಲುಗಳ ಜಯ ಸಾಧನೆ ಮಾಡಿತು. ಪೊನ್ನಂಪೇಟೆ ಪರ ಗೌತಂ 3 ಹಾಗೂ 25ನೇ ನಿಮಿಷಗಳಲ್ಲಿ 2 ಗೋಲು ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಚಾರ್ಮರ್ಸ್ ಪರ 31ನೇ ನಿಮಿಷದಲ್ಲಿ ಪೊನ್ನಣ್ಣ ಏಕೈಕ ಗೋಲು ಹೊಡೆದರು.

ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಮರ್ಕರಾ ಯುನೈಟೆಡ್ ತಂಡಗಳ ಪಂದ್ಯ 2-2 ಗೋಲುಗಳಿಂದ ಟೈ ಆಯಿತು. ಅಮ್ಮತ್ತಿ ಪರ 10ನೇ ನಿಮಿಷದಲ್ಲಿ ಪೂವಣ್ಣ, 37ರಲ್ಲಿ ಮುಕೇಶ್, ಮರ್ಕರಾ ಪರ 16 ಹಾಗೂ 19ನೇ ನಿಮಿಷಗಳಲ್ಲಿ ಪ್ರತಿಕ್ 2 ಗೋಲು ಹೊಡೆದು ಮಿಂಚಿದರು.

ಆಟದ ನೋಟ: ಆಡಿದ 2 ಪಂದ್ಯಗಳಲ್ಲೂ 1 ಸೋಲು, 1 ಡ್ರಾ ಸಾಧನೆ ಮಾಡಿದ ಅಮ್ಮತ್ತಿ ಹಾಗೂ ಮರ್ಕರಾ ಯುನೈಟೆಡ್, 3 ಪಂದ್ಯ ಗೆದ್ದು ಮುನ್ನಡೆಯಲ್ಲಿರುವ ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡ, ನಂತರ 2ನೇ ಸ್ಥಾನದಲ್ಲಿ 2 ಪಂದ್ಯ ಗೆದ್ದ ಸಾಧನೆಯಲ್ಲಿರುವ ಎಂಆರ್‌ಎಫ್ ಮೂರ್ನಾಡ್, ಬೇಗೂರು ಈಶ್ವರ ಯೂತ್‌ಕ್ಲಬ್, ಪೊನ್ನಂಪೇಟೆ ಸ್ಪೋರ್ಟ್ಸ್ ಕ್ಲಬ್ ತಂಡಗಳು.

ಜೋಡಿ ಗೋಲುಗಳ ಸರದಾರರು: ಇಲ್ಲಿವರೆಗೆ ನಡೆದ ಪಂದ್ಯಗಳಲ್ಲಿ 17 ಆಟಗಾರರು ಪಂದ್ಯವೊಂದರಲ್ಲಿಯೇ ಎರಡು ಗೋಲು ಹೊಡೆದಿರುವ ಸಾಧನೆ ಮಾಡಿದ್ದಾರೆ. ಬೇಗೂರು ತಂಡದ ದೀಪಕ್ 3 ಗೋಲು ಬಾರಿಸಿ ಟೂರ್ನಿಯ ಏಕೈಕ ಆಟಗಾರನಾಗಿದ್ದಾನೆ. ಪೊನ್ನಂಪೇಟೆ ಸ್ಪೋರ್ಟ್ಸ್ ತಂಡದ ಗೌತಂ ಆಡಿರುವ 2 ಪಂದ್ಯಗಳಲ್ಲೂ ತಲಾ 2 ಗೋಲು ಹೊಡೆದಿದ್ದಾರೆ. ಬೇಗೂರು ತಂಡದ ಕೌಶಿಕ್, ಕೋಣನಕಟ್ಟೆ ತಂಡದ ಗಣಪತಿ ಹಾಗೂ ಯಶ್ವಿನ್, ಬೇರಳಿನಾಡ್ ತಂಡದ ಬಿದ್ದಪ್ಪ, ಮೂರ್ನಾಡ್ ತಂಡದ ಬೋಪಣ್ಣ, ಪುನಿತ್, ಪ್ರಜ್ವಲ್, ಯಾಸಿರ್, ಪೊನ್ನಂಪೇಟೆಯ ನಿಶಿಕ್, ಚಾರ್ಮರ್ಸ್‌ನ ಮೋಹನ್, ಟಾಟಾ ಕಾಫಿಯ ಕಿರಣ್, ಕೂಡಿಗೆ ಸ್ಪೋಟ್ಸ್ ತಂಡದ ಯಶ್ವಂತ್, ಕಿರಣ್, ಮರ್ಕರಾ ತಂಡದ ಪ್ರತಿಕ್, ಪೊದ್ದ್‌ಮಾನಿಯ ಉತ್ತಯ್ಯ ಒಂದೇ ಪಂದ್ಯಗಳಲ್ಲಿ 2 ಗೋಲು ಹೊಡೆದ ಸಾಧನೆ ಮಾಡಿದ್ದಾರೆ.

ಇಂದಿನ ಪಂದ್ಯಗಳು
ಬೆಳಗ್ಗೆ 9ಕ್ಕೆ: ಬಿಬಿಸಿ-ಬಲಮುರಿ
ಬೆ.10.30ಕ್ಕೆ: ಚಾರ್ಮರ್ಸ್-ಅಮ್ಮತ್ತಿ
ಮಧ್ಯಾಹ್ನ 12.30ಕ್ಕೆ: ಹಾತೂರು-ಡಾಲ್ಫಿನ್ಸ್
ಮ.1.30ಕ್ಕೆ: ಬೇಗೂರು-ಕೋಣನಕಟ್ಟೆ
ಮ.2.30ಕ್ಕೆ: ಪೊದ್ದ್‌ಮಾನಿ-ಟಾಟಾ