ಹುಬ್ಬಳ್ಳಿ : ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ 4ನೇ ಅಧಿವೇಶನ ಜೂನ್ 7 ಮತ್ತು 8ರಂದು ದಾವಣಗೆರೆಯ ಗುಂಡಿ ಮಹದೇವಪ್ಪ ಕಲ್ಯಾಣ ಮಂದಿರದಲ್ಲಿ ನಡೆಯಲಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಪರಿಷತ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್, ಬಾಗಲಕೋಟೆಯ ಸಾಹಿತ್ಯ ಸಾಧಕ ಎಸ್.ಜಿ. ಕೋಟಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ ಎಂದರು.
ಈ ಬಾರಿಯ ಅಧಿವೇಶನ ‘ಸಾಹಿತ್ಯದಲ್ಲಿ ಸ್ವತ್ವ’ ವಿಷಯದ ಮೇಲೆ ನಡೆಯಲಿದೆ. ಸ್ವಂತಿಕೆ, ತನ್ನತನ, ಸ್ವಗುಣ ಮತ್ತಿತರ ಧ್ವನಿಗಳನ್ನು ಬಿಂಬಿಸುವ ಸ್ವತ್ವವು ಸಾಹಿತ್ಯದಲ್ಲಿ ಹೇಗೆ ಬಿಂಬಿತವಾಗಿದೆ ಮತ್ತು ಹೇಗೆ ಬಿಂಬಿತವಾಗಬೇಕು ಎಂಬ ವಿಷಯ ರ್ಚಚಿತವಾಗಲಿವೆ ಎಂದರು.
ಜೂ. 7ರ ಬೆಳಗ್ಗೆ 10 ಗಂಟೆಗೆ ಸಾಹಿತಿ, ಚಿಂತಕ ಹಾಗೂ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಪ್ರೊ. ಪ್ರೇಮಶೇಖರ ಅಧಿವೇಶನ ಉದ್ಘಾಟಿಸುವರು. 8ರಂದು ಮಧ್ಯಾಹ್ನ ನಡೆಯಲಿರುವ ಅಧಿವೇಶನದ ಸಮಾರೋಪ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಸಂಯುಕ್ತ ಪ್ರಧಾನ ಕಾರ್ಯದರ್ಶಿ ಪವನಪುತ್ರ ಬಾದಲ್ ಸಮಾರೋಪ ಭಾಷಣ ಮಾಡುವರು. ಗದಗ ಹಾಗೂ ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ ಶ್ರೀ ನಿರ್ಭಯಾನಂದ ಸ್ವಾಮೀಜಿ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಎರಡು ದಿನಗಳ ಅಧಿವೇಶನದಲ್ಲಿ ಪುಸ್ತಕಗಳ ಮಾರಾಟ ವ್ಯವಸ್ಥೆಯೂ ಇದೆ. ಒಂದು ಸಾವಿರಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಪರಿಷತ್ತಿನ ರಾಜ್ಯ ಕಾರ್ಯಕಾರಿಣಿ ಸದಸ್ಯ ಜನಮೇಜಯ ಉಮರ್ಜಿ, ಧಾರವಾಡ ಜಿಲ್ಲಾ ಅಧ್ಯಕ್ಷ ಸುಶೀಲೇಂದ್ರ ಕುಂದರಗಿ, ಜಿಲ್ಲಾ ಸಂಚಾಲಕ ಹನುಮಂತ ದೇಶಕುಲಕರ್ಣಿ, ಶಂಕ್ರಯ್ಯ ಹಿರೇಮಠ, ಅಶ್ವಿನಿ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ಇದ್ದರು.