4,79,649 ಮತಗಳ ಅಂತರದ ಗೆಲುವು ಸಾಧಿಸಿದ ಅನಂತ

ಕಾರವಾರ: ಬಿಜೆಪಿ ಅಭ್ಯರ್ಥಿ ಅನಂತ ಕುಮಾರ ಹೆಗಡೆ ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್​ನ ಆನಂದ ಅಸ್ನೋಟಿಕರ್ ವಿರುದ್ಧ 4,79,649 ಮತಗಳ ಭಾರಿ ಅಂತರದಿಂದ ಜಯಗಳಿಸಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿದಂದ 6 ನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಪ್ರಸ್ತುತ ಸಾರ್ವತ್ರಿಕ ಚುನಾವಣೆಯಲ್ಲಿ ದೇಶದಲ್ಲಿ ಅತಿ ಹೆಚ್ಚು ಅಂತರದಿಂದ ಜಯ ಗಳಿಸಿದ ಸಂಸದರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಜೊತೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮತ ಅಂತರದಿಂದ ಆಯ್ಕೆಯಾದ ಮೊದಲ ಸಂಸದ ಹಾಗೂ ರಾಜ್ಯದಲ್ಲಿಯೇ ಅತಿ ಹೆಚ್ಚು ಲೀಡ್ ಪಡೆದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಮೋದಿ ಅಲೆಯ ಪ್ರಭಾವ: ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಭಾರಿ ಅಂತರದಿಂದ ಗೆದ್ದರೂ ಅದಕ್ಕೆ ಮೋದಿ ಅಲೆಯೇ ಕಾರಣ ಎಂಬುದು ವಾಸ್ತವ. ಅನಂತ ಕುಮಾರ ಹೆಗಡೆ ಐದು ಬಾರಿ ಆಯ್ಕೆಯಾದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಕ್ಷೇತ್ರದ ಜನರಿಗೆ ಸಿಗುತ್ತಿಲ್ಲ. ವಿವಾದಾತ್ಮಕ ಹೇಳಿಕೆ ನೀಡುತ್ತಾರೆ ಎಂಬ ಆಕ್ಷೇಪವಿತ್ತು. ಅವರ ಬಗ್ಗೆ ಸ್ವತಃ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳೂ ಸೇರಿ ಕ್ಷೇತ್ರಾದ್ಯಂತ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಸ್ವತಃ ಅನಂತ ಕುಮಾರ ಹೆಗಡೆ ಮೋದಿ ಹೆಸರಿನಲ್ಲಿ ಮತ ಯಾಚಿಸಿದ್ದರು. ಬಿಜೆಪಿ ಕಾರ್ಯಕರ್ತರೂ ಪ್ರಚಾರ ಸಂದರ್ಭದಲ್ಲಿ ಅನಂತ ಕುಮಾರ ಹೆಗಡೆ ಅವರಿಗಿಂತ ಮೋದಿ ಹೆಸರನ್ನೇ ಹೆಚ್ಚು ಪ್ರಸ್ತಾಪ ಮಾಡಿದ್ದರು ಎಂಬುದು ಗಮನಾರ್ಹ. 2014 ರಲ್ಲಿಯೂ ಅನಂತ ಕುಮಾರ ಹೆಗಡೆ ಮೋದಿ ಹೆಸರಿನಲ್ಲಿ ಮತ ಯಾಚನೆ ಮಾಡಿ 1.4 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿಯೂ ಅದೇ ಗಾಳಿ ಅನಂತ ಕುಮಾರ ಅವರನ್ನು ಮತ್ತೊಮ್ಮೆ ಗೆಲ್ಲಿಸಿದೆ ಎಂಬುದರಲ್ಲಿ ಸಂಶಯವಿಲ್ಲ.

ಮತ ಸೆಳೆಯದ ಮಾತು

ಅನಂತ ಕುಮಾರ ಹೆಗಡೆ ಹಿಂದು ಯುವಕರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯುವಕರಿಗೆ ಉದ್ಯೋಗ ಕೊಡುವ ಬದಲು ಅವರ ಕೈಗೆ ಕತ್ತಿ ಕೊಡುತ್ತಿದ್ದಾರೆ. ಕ್ಷೇತ್ರದಲ್ಲಿ ಬಹು ಸಂಖ್ಯಾತರಾಗಿರುವ ಹಿಂದುಳಿದ ವರ್ಗದವರು ಒಟ್ಟಾಗಬೇಕು ಎಂದು ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಕರೆ ನೀಡಿದ್ದರು. ಆದರೆ, ಅವರ ಮಾತಿಗೆ ಬೆಲೆ ಕೊಡದೇ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ.

ಬಾರದ ಏಜೆಂಟರು, ಮುಖಂಡರು

ಮತ ಎಣಿಕೆ ಕೇಂದ್ರದಲ್ಲಿ ಬಿಜೆಪಿ ಕಾರ್ಯಕರ್ತರ ಉತ್ಸಾಹ ಜೋರಾಗಿತ್ತು. ಪ್ರತಿ ಟೇಬಲ್​ಗೂ ಪ್ರತಿ ಅಭ್ಯರ್ಥಿಯ ಏಜೆಂಟರ ನೇಮಕಕ್ಕೆ ಅವಕಾಶವಿತ್ತು. ಆದರೆ, ಬಿಜೆಪಿ ಮಾತ್ರ ಎಲ್ಲ ಟೇಬಲ್​ಗಳಿಗೆ ಏಜೆಂಟರನ್ನು ನೇಮಿಸಿತ್ತು. ಕೆಲವು ಕ್ಷೇತ್ರಗಳ ಮತ ಎಣಿಕೆ ಕೇಂದ್ರದಲ್ಲಿ ಮಾತ್ರ ಜೆಡಿಎಸ್ ಏಜೆಂಟರು ಕಂಡುಬಂದರು. ಉಳಿದ 11 ಅಭ್ಯರ್ಥಿಗಳ ಏಜೆಂಟರು ಅಲ್ಲೊಬ್ಬರು ಇಲ್ಲೊಬ್ಬರು ಕಂಡುಬಂದರು. ಮತ ಎಣಿಕೆ ಕೇಂದ್ರದಲ್ಲಿ ಕಾಂಗ್ರೆಸ್​ನ ಒಬ್ಬ ನಾಯಕರ ಮುಖವೂ ಕಂಡುಬಂದಿಲ್ಲ. ಅಭ್ಯರ್ಥಿ ಆನಂದ ಅಸ್ನೋಟಿಕರ್ ಸಹ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿರಲಿಲ್ಲ.

ಇದು ಪ್ರಧಾನಿ ಮೋದಿ ಅಲೆಯ ದಿಗ್ವಿಜಯ
ನಿಮ್ಮ ಗೆಲುವನ್ನು ಯಾವ ರೀತಿ ವಿಶ್ಲೇಷಿಸುತ್ತೀರಿ..?

ಕಳೆದ ಐದು ವರ್ಷಗಳಿಂದ ದೇಶ ಶಕ್ತಿ ಕೇಂದ್ರಿತ, ಜನ ಕೇಂದ್ರಿತ, ಸೇವಾ ಕೇಂದ್ರಿತ ರಾಜಕಾರಣವನ್ನು ಮೋದಿಯವರು ಮಾಡಿಕೊಂಡು ಬಂದಿದ್ದಾರೆ ಅದನ್ನು ಜನ ನೆಚ್ಚಿದ್ದಾರೆ.

ಇದು ಮೋದಿ ಅಲೆಯ ವಿಜಯ ಎಂದು ಒಪ್ಪಿಕೊಳ್ಳುತ್ತೀರಾ..?
ಖಂಡಿತ ಅವರ ನೇತೃತ್ವದಲ್ಲಿ ಬಿಜೆಪಿಯ ರಾಜಕಾರಣದಲ್ಲಿ ಹೊಸ ಪರ್ವ ಪ್ರಾರಂಭಿಸಿದೆ. ಒಟ್ಟಾರೆ ಚುನಾವಣೆ ಗೆಲ್ಲಬೇಕು. ಅಧಿಕಾರ ಹಿಡಿಯಬೇಕು ಎಂಬ ಉದ್ದೇಶ ನಮ್ಮದಲ್ಲ.

ಮೈತ್ರಿ ಕಚ್ಚಾಟದಿಂದ ನಿಮ್ಮ ಗೆಲುವು ಸುಲಭವಾಯಿತೇ..?
ದೇಶದಲ್ಲಿ ಜನ ಜಾಗೃತರಾಗಿದ್ದಾರೆ. ತಮ್ಮ ಜನಪ್ರತಿನಿಧಿ ಆಯ್ಕೆ ನಿಟ್ಟಿನಲ್ಲಿ ರಾಜಕಾರಣದಲ್ಲಿ ಸಕಾರಾತ್ಮಕ ಬದಲಾವಣೆ ಬರುತ್ತಿದೆ. ಇದಕ್ಕೆ ಪೂರಕವಾಗಿ ಕ್ಷೇತ್ರದ ಮತದಾರರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದುಕೊಳ್ಳುತ್ತೇನೆ.

ಸಂಸದರಾಗಿ ನಿಮ್ಮ ಕ್ಷೇತ್ರದ ಜನರಿಗೆ ಯಾವ ಭರವಸೆ ನೀಡಲು ಬಯಸುತ್ತೀರಿ..?
ಪೊಳ್ಳು ಭರವಸೆಗಳನ್ನು ನೀಡುವ ರಾಜಕಾರಣಿಗಳು ನಾನಲ್ಲ. ಮುಂದಿನ ತಲೆಮಾರು ನೆನಪಿಡುವ ರೀತಿಯಲ್ಲಿ ಮೋದಿ ಸರ್ಕಾರ ಆಡಳಿತ ನಡೆಸಲಿದೆ. ಬದಲಾಗುತ್ತಿರುವ ಪ್ರಸಕ್ತ ವಿದ್ಯಮಾನದಲ್ಲಿ ಭಾರತವನ್ನೂ ಆ ನಿಟ್ಟಿನಲ್ಲಿ ಕೊಂಡೊಯ್ಯಲು ಬದ್ಧರಾಗಿದ್ದೇವೆ.

Leave a Reply

Your email address will not be published. Required fields are marked *