ಮತ್ತೆ ಸಾವಿತ್ರಿ ಆಗಲಿರುವ ಕೀರ್ತಿ

‘ಮಹಾನಟಿ’ ಚಿತ್ರದಲ್ಲಿ ನಟಿ ಸಾವಿತ್ರಿ ಪಾತ್ರಕ್ಕೆ ಜೀವ ತುಂಬಿ ಕೀರ್ತಿ ಸುರೇಶ್ ಭೇಷ್ ಎನಿಸಿಕೊಂಡಿದ್ದರು. ಆ ಚಿತ್ರ ದೊಡ್ಡಮಟ್ಟದ ಯಶಸ್ಸು ಕಂಡಿತ್ತು. ಈಗ ಅವರು ಮತ್ತೆ ಸಾವಿತ್ರಿ ಅವತಾರ ತಾಳುತ್ತಿದ್ದಾರೆ! ಹಾಗಾದರೆ ಮತ್ತೆ ‘ಸಾವಿತ್ರಿ’ ಬಯೋಪಿಕ್ ಆಗಲಿದೆಯೇ? ಖಂಡಿತವಾಗಿಯೂ ಇಲ್ಲ. ಅವರು ಸಾವಿತ್ರಿ ಪಾತ್ರ ಮಾಡುತ್ತಿರುವುದು ‘ಎನ್​ಟಿಆರ್’ ಬಯೋಪಿಕ್​ನಲ್ಲಿ. ಸಿನಿಮಾ ಹಾಗೂ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಎನ್​ಟಿಆರ್ ಕುರಿತು ಬಯೋಪಿಕ್ ಸಿದ್ಧಗೊಳ್ಳುತ್ತಿದೆ. ಕ್ರಿಷ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಎನ್​ಟಿಆರ್ ಜೀವನದಲ್ಲಿ ಬಹುಮುಖ್ಯ ಪಾತ್ರವಹಿಸಿದ್ದ ಅನೇಕ ಕ್ಯಾರೆಕ್ಟರ್​ಗಳು ಈ ಚಿತ್ರದಲ್ಲಿ ಬಂದು ಹೋಗಲಿವೆ. ಅದರಲ್ಲಿ ಸಾವಿತ್ರಿ ಕೂಡ ಒಬ್ಬರು. ‘ಮಿಸ್ಸಮ್ಮಾ’ ಸೇರಿ ಅನೇಕ ಚಿತ್ರಗಳಲ್ಲಿ ಎನ್​ಟಿಆರ್ ಮತ್ತು ಸಾವಿತ್ರಿ ಒಟ್ಟಾಗಿ ನಟಿಸಿದ್ದರು. ಹಾಗಾಗಿ ‘ಮಹಾನಟಿ’ಯಲ್ಲಿ ಸಾವಿತ್ರಿ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಕೀರ್ತಿ ಅವರೇ ಈ ಪಾತ್ರ ನಿರ್ವಹಿಸಬೇಕು ಎಂಬುದು ನಿರ್ದೇಶಕರ ಬೇಡಿಕೆ. ಈಗಾಗಲೇ ಕೀರ್ತಿ ಬಳಿ ಈ ವಿಚಾರವಾಗಿ ಕ್ರಿಷ್ ಮಾತುಕತೆ ನಡೆಸಿದ್ದು, ಕಾಲ್​ಶೀಟ್ ಪಡೆದಿದ್ದಾರಂತೆ. ಕೀರ್ತಿ ಕೂಡ ಮತ್ತೊಮ್ಮೆ ಸಾವಿತ್ರಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವುದಕ್ಕೆ ಸಖತ್ ಖುಷಿ ಆಗಿದ್ದಾರಂತೆ. ಈ ವಿಚಾರ ಕೇಳಿ ಪ್ರೇಕ್ಷಕರ ಕುತೂಹಲ ಗರಿಗೆದರಿದೆ. ಈ ಸಿನಿಮಾದಲ್ಲಿ ಅಕ್ಕಿನೇನಿ ನಾಗೇಶ್ವರ್​ರಾವ್ ಪಾತ್ರ ಬಹುಮುಖ್ಯವಾದುದು. ಆ ಪಾತ್ರವನ್ನು ನಾಗಚೈತನ್ಯ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಈಗ ಆ ಆಫರ್ ಸುಮಂತ್ ಪಾಲಾಗಿದೆಯಂತೆ.-ಏಜೆನ್ಸೀಸ್