ಕರಾಚಿ: ಪಾಕಿಸ್ತಾನದ ಅತಿ ದೊಡ್ಡ ನಗರವಾದ ಕರಾಚಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಉಷ್ಣ ಮಾರುತದ ಹೊಡೆತದಿಂದ ಕನಿಷ್ಠ 450 ಜನರು ಮೃತಪಟ್ಟಿದ್ದಾರೆಂದು ಸರ್ಕಾರೇತರ ಸಂಸ್ಥೆಯೊಂದು ಬುಧವಾರ ಹೇಳಿದೆ.
ಬುಧವಾರ ಹೊರತುಪಡಿಸಿ ಕಳೆದ ನಾಲ್ಕು ದಿನಗಳಲ್ಲಿ ತಾನು ಕನಿಷ್ಠ 427 ಶವಗಳನ್ನು ಪಡೆದಿರುವುದಾಗಿ ಏಧಿ ಫೌಂಡೇಷನ್ ತಿಳಿಸಿದೆ. ಸಿಂಧ್ ಸರ್ಕಾರ ಮಂಗಳವಾರ ಮೂರು ಸರ್ಕಾರಿ ಆಸ್ಪತ್ರೆಗಳಿಂದ 23 ದೇಹಗಳನ್ನು ಬಿಡುಗಡೆ ಮಾಡಿದೆ. ಇದರಿಂದ ಮೃತರ ಸಂಖ್ಯೆ 450ಕ್ಕೇರಿರುವುದು ದೃಢಪಟ್ಟಿದೆ. ಪಾಕ್ನ ಬಂದರು ನಗರವಾದ ಕರಾಚಿ, ಕಳೆದ ಶನಿವಾರ ದಿಂದೀಚೆಗೆ ಅತಿಯಾದ ಬಿಸಿಲ ತಾಪದಿಂದ ಬಳಲುತ್ತಿದೆ. ಸತತ ಮೂರನೇ ದಿನವಾದ ಬುಧವಾರ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿತ್ತು. ಕರಾವಳಿ ಪ್ರದೇಶಗಳಿಗೆ ಇದು ತೀರಾ ಅಸಹನೀಯವಾದ ಉಷ್ಣತೆಯಾಗಿದೆ.
4 ಶವಾಗಾರಗಳು: ‘ನಾವು ಕರಾಚಿಯಲ್ಲಿ ನಾಲ್ಕು ಶವಾಗಾರಗಳನ್ನು ನಿರ್ವಹಿಸುತ್ತಿದ್ದೇವೆ. ಅವುಗಳಲ್ಲಿ ಇನ್ನಷ್ಟು ದೇಹಗಳನ್ನು ಇಡಲು ಸಾಧ್ಯವಾಗದ ಹಂತವನ್ನು ತಲುಪಿದ್ದೇವೆ’ ಎಂದು ಫೌಂಡೇಷನ್ ಮುಖ್ಯಸ್ಥ ಫೈಸಲ್ ಏಧಿ ಹೇಳಿದ್ದಾರೆ. ಏಧಿ ಟ್ರಸ್ಟ್ ಪಾಕ್ನ ಅತ್ಯಂತ ದೊಡ್ಡ ಕಲ್ಯಾಣ ಪ್ರತಿಷ್ಠಾನವಾಗಿದೆ. ಬಡವರು, ವಸತಿಹೀನರು, ಅನಾಥ ಬೀದಿ ಬದಿ ಮಕ್ಕಳು, ಪರಿತ್ಯಕ್ತ ಶಿಶುಗಳು ಮತ್ತು ಸಮಸ್ಯೆಗಳಿಂದ ಜಝುರಿತ ಮಹಿಳೆಯರು ಮೊದಲಾದವರಿಗೆ ಟ್ರಸ್ ನಾನಾ ಉಚಿತ ಅಥವಾ ಸಬ್ಸಿಡಿ ರೂಪದ ಸೇವೆ ಸಲ್ಲಿಸುತ್ತಿದೆ.