45 ಸೆಕೆಂಡ್​ ಅಂತರದಲ್ಲಿ ಡಿಕ್ಕಿಯಾಗಬೇಕಿದ್ದ ವಿಮಾನಗಳೆರಡು ಬಚಾವ್​!

ಗುವಾಹಟಿ: ಆಗಸದಲ್ಲೇ ಮುಖಾಮುಖಿ ಡಿಕ್ಕಿಯಾಗಿ ಘೋರ ದುರಂತಕ್ಕೆ ಸಾಕ್ಷಿಯಾಗುತ್ತಿದ್ದ ಎರಡು ಇಂಡಿಗೋ ವಿಮಾನಗಳು ಏರ್​ ಟ್ರಾಫಿಕ್​ ಕಂಟ್ರೋಲ್​ ಸಮಯ ಪ್ರಜ್ಞೆಯಿಂದ ಸ್ವಲ್ಪದರಲ್ಲೇ ಬಚಾವ್​ ಆದ ಘಟನೆ ಭಾರತ ಮತ್ತು ಬಾಂಗ್ಲಾದೇಶ ವಾಯುಪ್ರದೇಶದ ಗಡಿಯಲ್ಲಿ ನಡೆದಿದೆ ಎಂದು ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರ ತಿಳಿಸಿದೆ.

ಕೇವಲ 45 ಸೆಕೆಂಡ್​ಗಳಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇತ್ತು. ಆದರೆ, ಕೋಲ್ಕತಾದಲ್ಲಿರುವ ಏರ್​ ಟ್ರಾಫಿಕ್​ ಕಂಟ್ರೋಲ್​ ಸೂಚನೆ ನೀಡಿದ್ದರಿಂದ ಒಂದು ವಿಮಾನ ಬಲಭಾಗಕ್ಕೆ ತಿರುಗಿ ಚಲಿಸಿದೆ. ಇನ್ನೊಂದು ವಿಮಾನ ಅದೇ ಹಾದಿಯಲ್ಲಿ ಮುಂದೆ ಸಾಗಿದ್ದರಿಂದ ಅನಾಹುತ ಸಂಭವಿಸಿಲಿಲ್ಲ.

ಎರಡು ವಿಮಾನಗಳು ಕಡಿಮೆ ವೆಚ್ಚದಲ್ಲಿ ಸೇವೆ ನೀಡುತ್ತಿದ್ದವು. ಬುಧವಾರ ಸಂಜೆ ಒಂದೇ ಎತ್ತರದಲ್ಲಿ ಹಾರಾಟ ನಡೆಸಿದ್ದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇತ್ತು. ಆದರೆ, ಅದೃಷ್ಟವಶಾತ್​ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಕೋಲ್ಕತಾದ ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದು ವಿಮಾನ ಚೆನ್ನೈನಿಂದ ಗುವಾಹಟಿಗೆ ಬರುತ್ತಿತ್ತು. ಮತ್ತೊಂದು ವಿಮಾನ ಗುವಾಹಟಿಯಿಂದ ಕೋಲ್ಕತಾಗೆ ತೆರಳುತ್ತಿತ್ತು. ಎರಡು ವಿಮಾನಗಳು ಬುಧವಾರ ಸಂಜೆ 5.10ರ ಸುಮಾರಿಗೆ ಬಹಳ ಹತ್ತಿರದಲ್ಲಿ ಎದುರುಬದರಾಗಿದ್ದವು. ಕೋಲ್ಕತಾ ಮೂಲದಿಂದ ಬರುತ್ತಿದ್ದ ವಿಮಾನ 36,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಾ ಬಾಂಗ್ಲಾದೇಶದ ವಾಯುಪ್ರದೇಶದ ಗಡಿಯ ಬಳಿಯಲ್ಲಿ ಬಂದಿತ್ತು. ಮತ್ತೊಂದು ವಿಮಾನ 35,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಾ ಭಾರತದ ವಾಯುಪ್ರದೇಶ ಗಡಿ ಹತ್ತಿರ ಬಂದಿತ್ತು.

ಈ ವೇಳೆ ಬಾಂಗ್ಲಾದೇಶದ ಏರ್​ ಟ್ರಾಫಿಕ್​ ಕಂಟ್ರೋಲ್​ ಕೋಲ್ಕತಾ ಮೂಲದ ವಿಮಾನಕ್ಕೆ ಹಾರಾಟದ ಎತ್ತರವನ್ನು 35,000 ಅಡಿಗೆ ಇಳಿಸುವಂತೆ ಹೇಳಿತು. ಅದನ್ನು ವಿಮಾನ ಅನುಸರಿಸಿದ್ದರಿಂದ ತಕ್ಷಣ ಎಚ್ಚೆತ್ತ ಕೋಲ್ಕತ ಏರ್​ ಟ್ರಾಫಿಕ್​ ಕಂಟ್ರೋಲರ್​ ಚೆನ್ನೈ-ಗುವಾಹಟಿ ವಿಮಾನಕ್ಕೆ ತಿರುವು ಪಡೆದುಕೊಳ್ಳುವಂತೆ ಹೇಳಿದೆ. ಇದರಿಂದ ಭಾರಿ ದುರಂತ ತಪ್ಪಿದೆ.

ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಇಂಡಿಗೂ ವಕ್ತಾರ ತಿಳಿಸಿದರೆ, ತನಿಖೆಯನ್ನು ಪ್ರಾರಂಭಿಸಲಾಗುವುದು ಎಂದು ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿ ಹೇಳಿದ್ದಾರೆ. (ಏಜೆನ್ಸೀಸ್​)