More

  4130 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಪಥದ ರಸ್ತೆ

  ಪಿರಿಯಾಪಟ್ಟಣ: ಶ್ರೀರಂಗಪಟ್ಟಣದಿಂದ ಕುಶಾಲನಗರದವರೆಗೆ 4130 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಪಥದ ರಸ್ತೆ ನಿರ್ಮಿಸಲಾಗುತ್ತಿದ್ದು, 15 ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

  ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕಾರ್ಯಕರ್ತರ ಸಭೆ ನಡೆಸಿದ ನಂತರ ತಮ್ಮ ಹತ್ತು ವರ್ಷಗಳ ಅಧಿಕಾರ ಅವಧಿಯ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿ ಮಾತನಾಡಿದರು.

  ನಾನು ಮಾಡಿರುವ ಅಭಿವೃದ್ಧಿ ಕಾರ್ಯವನ್ನು ಜನರಿಗೆ ಮತ್ತೊಮ್ಮೆ ನೆನಪು ಮಾಡಿ ಅವರ ಆಶೀರ್ವಾದ ಕೇಳುವ ಸಲುವಾಗಿ ರಿಪೋರ್ಟ್ ಕಾರ್ಡ್ ಮಾಡಿ ಎಲ್ಲ ಗ್ರಾಮಗಳಿಗೆ ವಿತರಿಸಲಾಗುತ್ತಿದೆ. ಪಿರಿಯಾಪಟ್ಟಣ ತಾಲೂಕಿಗೆ ಹತ್ತು ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಅವುಗಳಲ್ಲಿ ಪ್ರಮುಖವಾಗಿ ಜೆಜೆಎಂ ಯೋಜನೆಯಡಿ ತಾಲೂಕಿನ 303 ಗ್ರಾಮಗಳಿಗೆ 239 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ನದಿಯಿಂದ ಕುಡಿಯುವ ನೀರು ಯೋಜನೆ ಜಾರಿ, 34 ಗ್ರಾಪಂಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಕೇಂದ್ರ ಸರ್ಕಾರದ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

  104 ಕೋಟಿ ರೂ. ವೆಚ್ಚದಲ್ಲಿ ಪಿರಿಯಾಪಟ್ಟಣ ಮತ್ತು ಕುಶಾಲನಗರಕ್ಕೆ ಕಾವೇರಿ ನದಿಯಿಂದ ಕುಡಿಯುವ ನೀರು ಯೋಜನೆ ಜಾರಿಗೊಳಿಸಲಾಗುತ್ತಿದೆ. ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಬಳಿಯಿಂದ ಕುಶಾಲನಗರದವರೆಗೆ ರೈಲು ಮಾರ್ಗ ನಿರ್ಮಿಸಲು ಈಗಾಗಲೇ ಅನುಮೋದನೆ ದೊರಕಿದ್ದು, 3097 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಪಟ್ಟಣದ ಮಸಣಿಕಮ್ಮ ದೇವಾಲಯದ ಅಭಿವೃದ್ಧಿಗೆ ಸಂಸದರ ನಿಧಿಯಿಂದ 50 ಲಕ್ಷ ರೂ., 4.22 ಕೋಟಿ ರೂ. ಕಾಣಿಕೆ ಸೇರಿದಂತೆ ಒಟ್ಟು 9.19 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ಅಭಿವೃದ್ಧಿಗೆ ಯೋಜನೆ ಸಿದ್ಧವಾಗಿದ್ದು ಆಡಳಿತಾತ್ಮಕ ಅನುಮೋದನೆ ಬಾಕಿ ಇದೆ ಎಂದರು.
  ಕುಶಾಲನಗರದ ಬಳಿ ಗ್ಯಾಸ್ ಪ್ಲಾಂಟ್ ನಿರ್ಮಿಸಲಾಗುತ್ತಿದ್ದು, ಪಿರಿಯಾಪಟ್ಟಣ ಸೇರಿದಂತೆ ತಾಲೂಕಿನ ಪ್ರಮುಖ ಗ್ರಾಮಗಳ ಪ್ರತಿ ಮನೆಗಳಿಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಸರಬರಾಜು ಮಾಡಲು ಒಂದೂವರೆ ವರ್ಷದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

  ಪ್ರಸ್ತುತ ಅನಧಿಕೃತ ತಂಬಾಕು ಬೆಳಗಾರರಿಗೆ ಶೇ.2ರಷ್ಟು ದಂಡ ವಿಧಿಸಲಾಗುತ್ತಿತ್ತು ಮತ್ತು ಶೇ.15 ಕಮಿಷನ್ ಪಡೆಯುತ್ತಿದ್ದ ತಂಬಾಕು ಮಂಡಳಿಯು ನನ್ನ ಹಾಗೂ ತಂಬಾಕು ಮಂಡಳಿಯ ಉಪಾಧ್ಯಕ್ಷ ಎಚ್.ಸಿ.ಬಸವರಾಜು, ಮೂವರು ನಿರ್ದೇಶಕರ ಪರಿಶ್ರಮದಿಂದಾಗಿ ಶೂನ್ಯ ಕಮಿಷನ್ ಮತ್ತು ಶೂನ್ಯ ದಂಡ ವಿಧಿಸಲಾಗುತ್ತಿದೆ. ತಂಬಾಕು ಹರಾಜು ಪ್ರಕ್ರಿಯೆ ಆರಂಭಗೊಂಡಾಗಿನಿಂದ ಮುಕ್ತಾಯಗೊಳ್ಳುವವರೆಗೂ ದರ ಏರಿಳಿತವಾಗದಂತೆ ಹರಾಜು ಪ್ರಕ್ರಿಯೆ ನಡೆಸುವಂತೆ ತಂಬಾಕು ಕಂಪನಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದ ಫಲವಾಗಿ ಈ ಬಾರಿ ತಂಬಾಕಿಗೆ ಸರಾಸರಿ ಪ್ರತಿ ಕೆ.ಜಿ.ಗೆ 260 ರೂ.ಗೂ ಹೆಚ್ಚು ದೊರೆಯುವಂತೆ ಮಾಡಲಾಗಿದೆ ಎಂದರು.

  ತಂಬಾಕು ಮಂಡಳಿ ಉಪಾಧ್ಯಕ್ಷ ಎಚ್.ಸಿ.ಬಸವರಾಜು, ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ.ರಾಜೇಗೌಡ, ಬಿಜೆಪಿ ಮುಖಂಡರಾದ ಮೈ.ವಿ.ರವಿಶಂಕರ್, ವಿ.ರಾಜೇಂದ್ರ, ವಸಂತ್ ಕುಮಾರ್, ಆರ್.ಟಿ.ಸತೀಶ್, ಕೆ.ಎನ್.ಸೋಮಶೇಖರ್, ಸವಿತಾ ಚೌಹಾಣ್, ಲೋಕಪಾಲಯ್ಯ, ಶುಭಾ, ಪ್ರಸನ್ನ, ಬೆಮತ್ತಿ ಕೃಷ್ಣ, ಬೆಮತ್ತಿ ಚಂದ್ರು ಇತರರು ಹಾಜರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts