ಕೌಶಲ ಅಭಿವೃದ್ಧಿಯಿಂದ ಉನ್ನತಿ ಸಾಧ್ಯ

ವಿಜಯವಾಣಿ ಸುದ್ದಿಜಾಲ ಸೇಡಂ
ಅಧ್ಯಯನದೊಂದಿಗೆ ಕೌಶಲ ಅಭಿವೃದ್ಧಿ ಅವಶ್ಯವಾಗಿದ್ದು, ಪದವಿಗಳೊಂದಿಗೆ ಕೌಶಲ ನಮ್ಮಲ್ಲಿದ್ದರೆ ಜೀವನದಲ್ಲಿ ಬಹು ಬೇಗ ಉನ್ನತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಪ್ರಮುಖರಾದ ಸಂತೋಷಿರಾಣಿ ಪಾಟೀಲ್ ತೆಲ್ಕೂರ ಹೇಳಿದರು.

ಇಲ್ಲಿನ ಸರ್ಕಾ ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಂಪ್ಯೂಸಿಸ್ ಪಾಯಿಂಟ್, ನ್ಯಾಸ್ಕಾಂ ಫೌಂಡೇಶನ್, ಟಿಎಂಐ ಸಂಸ್ಥೆಯಿಂದ ಆಯೋಜಿಸಿದ್ದ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮೂರು ತಿಂಗಳ ಉದ್ಯೋಗ ಆಧಾರಿತ ಬ್ಯುಸಿನೆಸ್ ಅನಾಲಿಸ್ಟ್ ಉಚಿತ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.

ಜೀವನದಲ್ಲಿ ಬದ್ಧತೆ ಮುಖ್ಯವಾಗಿರುತ್ತದೆ. ಆದ್ದರಿಂದ ತರಬೇತಿ ಕಾಲೇಜಿನ ಅಭ್ಯಾಸದೊಂದಿಗೆ ಅತಿ ಮಹತ್ವದ್ದಾಗಿದ್ದು, ಯಶಸ್ವಿ ತರಬೇತಿ ನಂತರ ಉದ್ಯೋಗಾವಕಾಶವನ್ನು ಸಂಸ್ಥೆಗಳು ನೀಡಲಿವೆ. ಇದೊಂದು ಹೆಮ್ಮೆಯ ವಿಷಯವಾಗಿದ್ದು, ಆದ್ದರಿಂದ ನಮ್ಮ ತಾಲೂಕಿನ ಎಲ್ಲ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕೆಂದರು.

ನಿವೃತ್ತ ಗ್ರಂಥಪಾಲಕ ಬನ್ನಪ್ಪ ಕುಂಬಾರ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನದೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದುವುದು ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಜ್ಜೆ ಹಾಕಬೇಕು ಎಂದರು.

ಪ್ರಾಧ್ಯಾಪಕ ಡಾ.ಶಶಿಶೇಖರರೆಡ್ಡಿ ಮಾತನಾಡಿದರು. ಪ್ರಾಚಾರ್ಯ ಡಾ.ಶಿವಶರಣಪ್ಪ ಧಾಬಾ ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಸಿಸ್ ಪಾಯಿಂಟ್ ನಿರ್ದೇಶಕ ದತ್ತಾತ್ರೇಯ ಐನಾಪುರ, ನಿರ್ದೇಶಕಿ ತನುಜಾ ಐನಾಪುರ ಇದ್ದರು.