ಈ ಡಾಕ್ಟರ್​ ವಯಸ್ಸು 41 ವರ್ಷ, ಆದರೆ ಅನುಭವ ಮಾತ್ರ 46 ವರ್ಷವಂತೆ!

ಲಂಡನ್​: ಈ ಡಾಕ್ಟರ್​ನ ವಯಸ್ಸು ಕೇವಲ 41 ವರ್ಷ. ಆದರೆ, ತನಗೆ ವೈದ್ಯಕೀಯ ಕ್ಷೇತ್ರದಲ್ಲಿ 46 ವರ್ಷ ಅನುಭವವಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಿಕ್ಕಿ ಬಿದ್ದಿದ್ದಾನೆ.

ಡಾ. ಖಾಸಿಫ್​ ಸಮಿನ್​ ಎಂಬ ಡಾಕ್ಟರ್​ ಬ್ರಿಟನ್​ನ ನಾರ್ಥ್​ ವೇಲ್ಸ್​ನಲ್ಲಿರುವ ಆಸ್ಪತ್ರೆಯೊಂದಕ್ಕೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದ. ಅದರಲ್ಲಿ ತಾನು ಮ್ಯಾಂಚೆಸ್ಟರ್​ ಮೆಟ್ರೊಪಾಲಿಟಿನ್​ ವಿಶ್ವವಿದ್ಯಾಲಯದಲ್ಲಿ ಎಮರ್ಜೆನ್ಸಿ ಮೆಡಿಸಿನ್​ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ ಮತ್ತು ನನಗೆ ವೈದ್ಯಕೀಯ ಕ್ಷೇತ್ರದಲ್ಲಿ 46 ವರ್ಷಗಳ ಅನುಭವವಿದೆ ಎಂದು ತನ್ನ ಅರ್ಜಿಯಲ್ಲಿ ತಿಳಿಸಿದ್ದ.

ಆದರೆ, ಅರ್ಜಿಯನ್ನು ಪರಿಶೀಲನೆಗೆ ಒಳಪಡಿಸಿದಾಗ ಈತ ಸುಳ್ಳು ದಾಖಲೆಗಳನ್ನು ತನ್ನ ಅರ್ಜಿಯೊಂದಿಗೆ ಲಗತ್ತಿಸಿರುವುದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಬ್ರಿಟನ್​ನ ಜನರಲ್​ ಮೆಡಿಕಲ್​ ಕೌನ್ಸಿಲ್​ನ ಮೆಡಿಕಲ್​ ಪ್ರಾಕ್ಟೀಷನರ್ಸ್​ ಟ್ರಿಬ್ಯೂನಲ್​ ಸರ್ವಿಸ್​ ಈತನ ಡಾಕ್ಟರ್​ ಲೈಸನ್ಸ್​ ಅನ್ನು ರದ್ದುಪಡಿಸಿದೆ. ಈ ಮೂಲಕ ಭವಿಷ್ಯದಲ್ಲಿ ಈತ ವೈದ್ಯಕೀಯ ವೃತ್ತಿ ಮುಂದುವರಿಸುವುದಕ್ಕೆ ತಡೆ ಹಾಕಿದೆ. (ಏಜೆನ್ಸೀಸ್​)