ನುಗ್ಗೇಹಳ್ಳಿ: ಚಾಮುಂಡೇಶ್ವರಿ ವಿದ್ಯುತ್ ಸರಬಾರಾಜು ನಿಗಮದ ವತಿಯಿಂದ ತಾಲೂಕಿನಲ್ಲಿ ಕುಸುಮ್ -ಸಿ ಸೋಲಾರ್ ಯೋಜನೆಯ ಮೂಲಕ 40 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದುರು.
ಹೋಬಳಿ ಕೇಂದ್ರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಯಮಿತ ಉಪ ವಿಭಾಗ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ 24/7 ಸೇವಾ ವಾಹನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನಲ್ಲಿ ಆಯ್ದ ಕೆಲವು ಭಾಗಗಳಲ್ಲಿ ಕುಸುಮ್ – ಸಿ ಸೋಲಾರ್ ಯೋಜನೆಯ ಮೂಲಕ 40 ಮೆಗಾ ವ್ಯಾಟ್ ಉತ್ಪಾದನೆ ಮಾಡಲು ಸೆಸ್ಕ್ ಅಧಿಕಾರಿಗಳು ಹೆಚ್ಚು ಕಾಳಜಿ ವಹಿಸಿದ್ದು, ಈಗಾಗಲೇ ಹೋಬಳಿಯ ಗಂಜಿಗೆರೆ ಬಳಿ 16 ಎಕರೆ ಸರ್ಕಾರಿ ಜಾಗವನ್ನು ಭೂಸ್ವಾಧೀನ ಮಾಡಲಾಗಿದೆ. ಬಾಗೂರು ಹೋಬಳಿಯ ಕಾಮನಾಯಕನಹಳ್ಳಿ ಗ್ರಾಮದ ಬಳಿ 6 ಎಕರೆ ಸರ್ಕಾರಿ ಜಾಗವನ್ನು ಗುರುತಿಸಲಾಗಿದ್ದು, ಇದರ ಜತೆಗೆ ಮಟ್ಟನವಿಲೆ ಗ್ರಾಮದ ಸುತ್ತಮುತ್ತ ರೈತರ ಸಹಭಾಗಿತ್ವದಲ್ಲಿ ಸುಮಾರು 12 ಎಕರೆ ಜಾಗವನ್ನು ಗುರುತು ಮಾಡಲಾಗಿದೆ. ರೈತರಿಗೆ ಪ್ರತಿ ವರ್ಷ ಈ ಯೋಜನೆ ಮೂಲಕ 1 ಎಕರೆಗೆ 25 ಸಾವಿರ ರೂ. ಬಾಡಿಗೆ ನೀಡಲಾಗುತ್ತದೆ. ರೈತರು ಈ ಯೋಜನೆಗೆ ಭೂಮಿ ನೀಡುವುದರಿಂದ ಹೆಚ್ಚಿನ ಹಣ ಪಡೆಯಬಹುದಾಗಿದೆ. ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಉತ್ಪಾದನೆಯಾದ ವಿದ್ಯುತ್ತನ್ನು ತಾಲೂಕಿಗೇ ಬಳಸಿಕೊಳ್ಳಬಹುದಾಗಿದೆ ಎಂದರು.
ಹೋಬಳಿ ಕೇಂದ್ರದ ಉಪ ವಿಭಾಗ ಕಚೇರಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಇಲಾಖೆ ವತಿಯಿಂದ 2.10 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಹೋಬಳಿಯ ತೆಂಕನಹಳ್ಳಿ ಗೇಟ್ ಬಳಿ 220 ಕೆವಿ ರಿಸೀವ್ ಸ್ಟೇಷನ್ ನಿರ್ಮಾಣಕ್ಕೆ ಈಗಾಗಲೇ ಆಡಳಿತಾತ್ಮಕವಾಗಿ ಅನುಮೋದನೆ ದೊರೆತಿದ್ದು, ಸದ್ಯದಲ್ಲೇ ಯೋಜನೆಗೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಉಪ ವಿಭಾಗ ಕಚೇರಿಗೆ ವ್ಯಾಪ್ತಿಗೆ ಬರುವ ಹಿರೀಸಾವೆ ಗ್ರಾಮವನ್ನು ಮಾದರಿ ಗ್ರಾಮ ಯೋಜನೆಗೆ ಆಯ್ಕೆ ಮಾಡಿಕೊಂಡಿದ್ದು, ಇದರಿಂದ ಗ್ರಾಮದಲ್ಲಿ ಸೋಲಾರ್ ಮಾದರಿ ಸೌರ ಗ್ರಾಮ ಯೋಜನೆ ಮೂಲಕ ಮುಂಬರುವ ದಿನಗಳಲ್ಲಿ ಗ್ರಾಹಕರಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ ಎಂದರು.
ನುಗ್ಗೇಹಳ್ಳಿ ಹೋಬಳಿ ಕೇಂದ್ರದಲ್ಲಿ 24/7 ಯೋಜನೆ ಮೂಲಕ ಈ ಭಾಗದ ಜನರಿಗೆ ವಿದ್ಯುತ್ ಇಲಾಖೆಯಿಂದ ಗುಣಮಟ್ಟದ ಸೇವೆ ದಿನದ 24 ಗಂಟೆಯೂ ಸಿಗಲಿದೆ. ಚನ್ನರಾಯಪಟ್ಟಣದ ನಂತರ ಈ ಯೋಜನೆಯನ್ನು ನುಗ್ಗೇಹಳ್ಳಿ ಹೋಬಳಿ ಕೇಂದ್ರದವರೆಗೆ ವಿಸ್ತರಣೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಶ್ರವಣಬೆಳಗೊಳ ಹಾಗೂ ಹಿರೀಸಾವೆ ಹೋಬಳಿ ಕೇಂದ್ರಗಳಿಗೂ ವಿಸ್ತರಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.
ಅಕ್ರಮ-ಸಕ್ರಮ ಯೋಜನೆ ಮೂಲಕ ತಾಲೂಕಿನಲ್ಲಿ ಬಾಕಿ ಉಳಿದಿರುವ ರೈತರಿಗೆ ಬಹುಬೇಗ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಕಳೆದ ಅಧಿವೇಶನದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮನವಿ ಮಾಡಲಾಗಿತ್ತು. ತಮ್ಮ ಮನವಿಗೆ ಸ್ಪಂದಿಸಿ ಡಿಸೆಂಬರ್ ಅಂತ್ಯದೊಳಗೆ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ ಎಂದರು.
ಹಿಂದೆ ಹೋಬಳಿ ಕೇಂದ್ರದಲ್ಲಿದ್ದ ಟ್ರಾನ್ಸ್‌ಫಾರ್ಮರ್ ರಿಪೇರಿ ಕೇಂದ್ರ ಕೆಲವು ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದು, ಇದರಿಂದ ಈ ಭಾಗದ ರೈತರಿಗೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಸೆಸ್ಕ್ ಎಂಡಿ ಅವರಿಗೆ ಈಗಾಗಲೇ ಮತ್ತೆ ಆರಂಭಿಸುವಂತೆ ಮನವಿ ಮಾಡಿದ್ದು ಸದ್ಯದಲ್ಲೇ ರಿಪೇರಿ ಸೆಂಟರ್ ತೆರೆಯಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಕಾರ್ಯಪಾಲಕ ಇಂಜಿನಿಯರ್ ರತ್ನಾ, ಡಿವಿಜನ್ ಇಂಜಿನಿಯರ್ ಹರೀಶ್, ನುಗ್ಗೇಹಳ್ಳಿ ಉಪ ವಿಭಾಗದ ಇಂಜಿನಿಯರ್ ಎಚ್.ಡಿ.ವಜ್ರ ಕುಮಾರ್, ಎಇ ಡಿ.ಎ.ಮಹದೇವ್, ಅಕ್ಕನಹಳ್ಳಿ ಕೂಡು ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬೆಳಗಳ್ಳಿ ಪುಟ್ಟಸ್ವಾಮಿ, ಕೃಷಿ ಪತ್ತಿನ ಅಧ್ಯಕ್ಷ ವಿಕ್ಟರ್, ಕೃಷಿ ಪತ್ತಿನ ಉಪಾಧ್ಯಕ್ಷ ಚಂದ್ರಣ್ಣ, ನಿರ್ದೇಶಕರಾದ ಹುಲಿಕೆರೆ ಸಂಪತ್ ಕುಮಾರ್, ಪಟೇಲ್ ಕುಮಾರ್, ಗ್ರಾಪಂ ಸದಸ್ಯರಾದ ಹೊನ್ನೇಗೌಡ, ನಟರಾಜ್, ಎನ್. ಎಸ್. ಮಂಜುನಾಥ್, ಎನ್. ಆರ್. ಶಿವಕುಮಾರ್, ದಾಕ್ಷಾಯಿಣಿ ಯಲ್ಲಪ್ಪ, ಮುಖಂಡರಾದ ಗುಂಡಣ್ಣ, ಮುರಳಿ, ಜಂಬೂರು ಅಪ್ಪಾಜಿ, ಸಲ್ಮಾನ್, ಗಂಗಣ್ಣ, ಅರ್ಚಕ ರಘು ದೀಕ್ಷಿತ್, ದಿಡಗ ವಿಭಾಗದ ಜೆಇ ಕೃಷ್ಣ, ಬಾಗೂರು ಮೋಹನ್ ಸೇರಿದಂತೆ ಸೆಸ್ಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.
ಕುಸುಮ್-ಸಿ ಯೋಜನೆಯಡಿ 40 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಗುರಿ

ಮಳೆಗಾಲದಲ್ಲಿ ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಬಳಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಿ! rainy season
rainy season: ಮಳೆಗಾಲದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಇತರ ಶಿಲೀಂಧ್ರ ಸೋಂಕುಗಳು ಸುಲಭವಾಗಿ ಹರಡುತ್ತವೆ. ಮಳೆಗಾಲದಲ್ಲಿ…
ಸಣ್ಣ ತೂಕ ಎತ್ತಿದರೂ ಸುಸ್ತಾಗುತ್ತಾ? ಹಾಗಾದರೆ ಈ ಆಹಾರಗಳಿಂದ ನರ ದೌರ್ಬಲ್ಯ ನಿವಾರಿಸಿ… Health Tips
Health Tips : ದೇಹವು ಸರಿಯಾದ ಪೋಷಕಾಂಶಗಳನ್ನು ಪಡೆಯದಿದ್ದರೆ, ಅನೇಕ ರೋಗಗಳಿಗೆ ತುತ್ತಾಗುತ್ತದೆ. ನಿಮ್ಮಲ್ಲಿರುವ ಕೆಟ್ಟ…