ಕಾಶ್ಮೀರಿಗಳ ಮೇಲೆ ದಾಳಿ ಪ್ರಕರಣ: 40 ಜನರನ್ನು ಬಂಧಿಸಿದ ಪೊಲೀಸರು

ಕೋಲ್ಕತ: ಪುಲ್ವಾಮಾ ಉಗ್ರ ದಾಳಿಯ ಬಳಿಕ ಪಶ್ಚಿಮ ಬಂಗಾಳದಾದ್ಯಂತ ಕಾಶ್ಮೀರಿಗಳ ಮೇಲಿನ ಹಲ್ಲೆ ನಡೆಸಿರುವ 22 ಪ್ರಕರಣ ಸಂಬಂಧ 40 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಕಾಶ್ಮೀರಿಗಳ ಮೇಲಿನ ದಾಳಿಯಲ್ಲಿ ಕೆಲ ಹೊರಗಿನ ಜನರು ಭಾಗಿಯಾಗಿದ್ದಾರೆ. ಅವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯಾದ್ಯಂತ 22 ಪ್ರಕರಣಗಳು ವರದಿಯಾಗಿದ್ದು, ಸುಮಾರು 40 ಜನರನ್ನು ಬಂಧಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿ ಸಿದ್ಧಾರ್ಥ್‌ ಗುಪ್ತಾ ತಿಳಿಸಿದ್ದಾರೆ.

ಕೋಲ್ಕತ ಪೊಲೀಸ್‌ ಆಯುಕ್ತ ಅನುಜ್‌ ಶರ್ಮಾ ಮಾತನಾಡಿ, ಈ ವಿಷಯವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಘಟನೆ ಸಂಬಂಧ ಕೆಲ ಜನರನ್ನು ಪತ್ತೆಹಚ್ಚಲು ನಮಗೆ ಸಾಧ್ಯವಾಗಿದೆ. ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಫೆ. 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯ ಬಳಿಕ ಸುಪ್ರೀಂ ಕೋರ್ಟ್‌ ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾಶ್ಮೀರಿಗಳ ಮತ್ತು ಇತರೆ ಅಲ್ಪಸಂಖ್ಯಾತರ ಮೇಲೆ ನಡೆಯುವ ದಾಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗಳಿಗೆ ಸೂಚಿಸಿತ್ತು.

ಇದನ್ನು ಹೊರತುಪಡಿಸಿ ಬಿಹಾರ, ಉತ್ತರಾಖಂಡ, ಪಶ್ಚಿಮ ಬಂಗಾಳ, ಹರಿಯಾಣ, ಛತ್ತೀಸ್‌ಗಢ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮೇಘಾಲಯ, ಪಂಜಾಬ್‌ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಿತ್ತು. (ಏಜೆನ್ಸೀಸ್)