40.45 ಕೋಟಿ ರೂ. ಅನುದಾನ ಬಿಡುಗಡೆ ಶೀಘ್ರ

ಗದಗ: ಗದಗ ಜಿಲ್ಲೆಯ ನೆರೆ ಪೀಡಿತ ಗ್ರಾಮಗಳ ಸಂಪರ್ಕ ರಸ್ತೆ, ಸೇತುವೆಗಳ ಮರು ನಿರ್ವಣಕ್ಕೆ ಶೀಘ್ರ 40.45 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲೆಯ ನೆರೆ ಪರಿಸ್ಥಿತಿ, ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ನೆರೆ ಪೀಡಿತ ಗ್ರಾಮಗಳಲ್ಲಿ ಹಾಳಾಗಿರುವ ರಸ್ತೆಗಳು ಹಾಗೂ ಕೊಚ್ಚಿ ಹೋದ ಸೇತುವೆಗಳನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಲು ಲೋಕೋಪಯೋಗಿ ಇಲಾಖೆ ಕ್ರಮ ಜರುಗಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿನ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿ ಸ್ವಚ್ಛತೆ ಹಾಗೂ ನಿರ್ವಹಣೆಯಲ್ಲಿ ಲೋಪದೋಷಗಳು ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಡಾ. ಬಿ.ಆರ್. ಅಂಬೇಡ್ಕರ್, ವಾಲ್ಮೀಕಿ, ಡಾ. ಜಗಜೀವನರಾಮ್ ನಿಗಮಗಳ ಪ್ರಸಕ್ತ ಸಾಲಿನ ಫಲಾನುಭವಿಗಳ ಆಯ್ಕೆಯನ್ನು ಶೀಘ್ರ ಅಂತಿಮಗೊಳಿಸಿ ಸೌಲಭ್ಯ ವಿತರಿಸಬೇಕು ಎಂದು ನಿರ್ದೇಶನ ನೀಡಿದರು. ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಪ್ರಕಾಶ ಮಾತನಾಡಿ, ನೆರೆ ಹಾನಿಗೊಳಗಾದ ರಸ್ತೆ, ಸೇತುವೆಗಳ ತಾತ್ಕಾಲಿಕ ದುರಸ್ತಿಗಾಗಿ 2.10 ಕೋಟಿ ರೂ. ಬಿಡುಗಡೆಯಾಗಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ, ಸೇತುವೆಗಳ ಪುನರ್ ನಿರ್ವಣಕ್ಕೆ ಒಟ್ಟು 40.45 ಕೋಟಿ ರೂ. ಅಗತ್ಯವಿದೆ. ಜಿಲ್ಲೆಯಲ್ಲಿ 54.56 ಕಿಮೀ ರಾಜ್ಯ ಹೆದ್ದಾರಿ, 38.80 ಕಿಮೀ ಜಿಲ್ಲಾ ಮುಖ್ಯರಸ್ತೆ, ಒಟ್ಟು 24 ಸೇತುವೆಗಳು ಹಾಗೂ 4 ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿವೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಪಂ ಸಿಇಒ ಡಾ. ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರ ಶಿವಯೋಗಿ ಹಿರೇಮಠ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಖಾಜಾಹುಸೇನ್ ಮುಧೋಳ, ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

9,937 ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರ

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಮಲಪ್ರಭಾ ಹಾಗೂ ತುಂಗಭದ್ರಾ ನದಿಗಳ ಪ್ರವಾಹದಿಂದ ಈವರೆಗೆ 9,937 ಕುಟುಂಬಗಳಿಗೆ ತಲಾ ಹತ್ತು ಸಾವಿರ ರೂ. ಪರಿಹಾರ ನೀಡಲಾಗಿದೆ. ನರಗುಂದ ತಾಲೂಕಿನಲ್ಲಿ 2,292, ರೋಣದಲ್ಲಿ 858 ಹಾಗೂ ಶಿರಹಟ್ಟಿಯಲ್ಲಿ 48 ಮನೆಗಳಿಗೆ ಹಾನಿಯಾಗಿದೆ. ಕೊಣ್ಣೂರಿನಲ್ಲಿ ನೆರೆ ಸಂತ್ರಸ್ತರಿಗೆ 120 ಶೆಡ್​ಗಳನ್ನು ನಿರ್ವಿುಸಿದ್ದು, 51 ಶಾಲಾ ಶೆಡ್​ಗಳ ನಿರ್ವಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮನೆ ಹಾನಿ ಕುರಿತ ಸಮಗ್ರ ದತ್ತಾಂಶ ಒದಗಿಸುವ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *