ಚಿತ್ರದುರ್ಗ: ವೀರ ಮದಕರಿ ನಾಯಕರಾಳಿದ ಚಿತ್ರದುರ್ಗದ ಐತಿಹಾಸಿಕ ಕೋಟೆ ಅಭಿವೃದ್ಧಿಗೆ 30 ಕೋಟಿ ರೂ. ಹಾಗೂ ಚಂದ್ರವಳ್ಳಿಯನ್ನು 10 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಕೆಎಂಇಆರ್‌ಸಿ ಅನುದಾನದಲ್ಲಿ ಕೋಟೆ ಮತ್ತು ಚಂದ್ರವಳ್ಳಿಯನ್ನು ಅಭಿ ವೃದ್ಧಿ ಪಡಿಸಲಾಗುವುದು.
ಪ್ರತಿ ಶನಿವಾರ, ಭಾನುವಾರ ದೇಶ, ರಾಜ್ಯದ ಸಂಸ್ಕೃತಿ,ನಾಡಹಬ್ಬ ಹಾಗೂ ರಾಷ್ಟ್ರೀಯ ನಾಯಕರ ವಿಚಾರಧಾರೆಗಳನ್ನು ಬಿಂಬಿಸುವ ವಿಶೇಷ ಧ್ವನಿ -ಬೆಳಕಿನ ಕಾರ‌್ಯಕ್ರಮ, ದೀಪಾಲಂಕಾರ ಕೈಗೊಳ್ಳುವುದು ಸೇರಿದಂತೆ ಕೋಟೆಯ ಸಮಗ್ರ ವಿವಿಧ ಅಭಿವೃದ್ಧಿ ಕಾರ‌್ಯಗಳನ್ನು ಕೈಗೆತ್ತಿಕೊಳ್ಳಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ.
ಕೋಟೆಯಲ್ಲಿ ಥೀಮ್‌ಪಾರ್ಕ್ ನಿರ್ಮಿಸಬೇಕೆಂಬ ಜನರ ಒತ್ತಾಯವಿದೆ. ಅಲ್ಲಿಯ ಒಂದು ಭಾಗದಲ್ಲಿ ಥೀಮ್‌ಪಾರ್ಕನ್ನು ಮಾಡಬೇಕೆಂಬುದು ನನ್ನ ಆಶಯವಾಗಿದೆ. ಈ ಕುರಿತಂತೆ ಡಿಸೈನ್ ಮಾಡಲು ತಿಳಿಸಿದ್ದೇ ಎಂದರು.
ಚಂದ್ರವಳ್ಳಿಯನ್ನು ಕೂಡ ಅಭಿವೃದ್ದಿಪಡಿಸಲು 10 ಕೋಟಿ ರೂ.ವೆಚ್ಚದಲ್ಲಿ ಹಾಗೂ ಹೊಳಲ್ಕೆರೆ ರಸ್ತೆಯಲ್ಲಿರುವ ದೊಡ್ಡಹೊಟ್ಟೆ ರಂಗಸ್ವಾಮಿ ದೇ ವಾಲಯದ ಅಭಿವೃದ್ಧಿಗೆ 4.5 ಕೋಟಿ ರೂ.ಅನುದಾನ ಒದಗಿಸಲಾಗಿದೆ ಎಂದರು. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಶಿ ಕುಮಾರ್ ಇದ್ದರು.