ಐಎಸ್​ಐ ಬೇಹುಗಾರರನ್ನು ಬಳಸಿಕೊಂಡು ಭಯೋತ್ಪಾದನಾ ದಾಳಿಯ ಪಾಕ್​ ಸಂಚು ಬಯಲು: ನಾಲ್ವರ ಬಂಧನ

ನವದೆಹಲಿ: ತನ್ನ ಬೇಹುಗಾರರನ್ನು ಬಳಸಿಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ನೆಲೆಗಳ ಮೇಲೆ ಭಯೋತ್ಪಾದನಾ ದಾಳಿ ನಡೆಸುವ ಪಾಕಿಸ್ತಾನದ ಸಂಚು ಬಯಲಾಗಿದೆ. ಕಣಿವೆ ರಾಜ್ಯದ ದೋಡಾ, ಉಧಂಪುರ ಮತ್ತು ಕಥುವಾದಲ್ಲಿ ನಾಲ್ವರು ಐಎಸ್​ಐ ಬೇಹುಗಾರರನ್ನು ಬಂಧಿಸುವ ಮೂಲಕ ಭದ್ರತಾಪಡೆ ಯೋಧರು ಈ ಸಂಚನ್ನು ಬಯಲುಗೊಳಿಸಿದ್ದಾರೆ.

ದೋಡಾ ಜಿಲ್ಲೆಯ ಮುಶ್ತಾಖ್​ ಅಹ್ಮದ್​, ಕಥುವಾ ಜಿಲ್ಲೆಯ ನದೀಂ ಅಖ್ತರ್​ ಬಂಧಿತರು. ಇನ್ನಿಬ್ಬರ ಹೆಸರು ಬಹಿರಂಗಗೊಂಡಿಲ್ಲ. ಜಮ್ಮು ಪ್ರದೇಶದಲ್ಲಿ ಸೇನಾ ನೆಲೆಗಳ ವಿಡಿಯೋ ಚಿತ್ರೀಕರಿಸುವಾಗ ಇವರನ್ನು ಬಂಧಿಸಲಾಯಿತು ಎಂದು ಭದ್ರತಾಪಡೆ ಮೂಲಗಳು ತಿಳಿಸಿವೆ. ಇವರೆಲ್ಲರೂ ಪಾಕಿಸ್ತಾನದ ಐಎಸ್​ಐನ ಕರ್ನಲ್​ ಇಫ್ತಿಕಾರ್​ ಅಹ್ಮದ್​ ಜತೆ ನೇರ ಸಂಪರ್ಕ ಹೊಂದಿದ್ದರು ಎಂದು ಹೇಳಿವೆ.

ಜಮ್ಮುವಿನ ಸೇನಾ ನೆಲೆಯ ಹೊರಭಾಗದಲ್ಲಿ ವಿಡಿಯೋ ಚಿತ್ರೀಕರಿಸುವಾಗ ಇಬ್ಬರು ಶಂಕಿತರನ್ನು ಭದ್ರತಾಪಡೆ ಸಿಬ್ಬಂದಿ ಬಂಧಿಸಿದ್ದರು. ಇವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದಾಗ ಬೇಹುಗಾರರನ್ನು ಬಳಸಿಕೊಂಡು ಉಗ್ರ ದಾಳಿ ನಡೆಸುವ ಪಾಕ್​ನ ಕುಕೃತ್ಯ ಬಯಲಾಗಿತ್ತು.

ಬಂಧಿತ ಶಂಕಿತರ ಮೊಬೈಲ್​ ಫೋನ್​ಗಳನ್ನು ಪರಿಶೀಲಿಸಿದಾಗ ಅವರೆಲ್ಲರೂ ಪಾಕಿಸ್ತಾನದಲ್ಲಿರುವ ಒಬ್ಬ ವ್ಯಕ್ತಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಪತ್ತೆಯಾಗಿತ್ತು. ಅಲ್ಲದೆ, ಬಂಧನಕ್ಕೆ ಒಳಗಾಗುವ ಕೆಲವೇ ಗಂಟೆಗಳ ಮೊದಲು ತಮ್ಮ ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡಿದ್ದ ಸೇನಾ ನೆಲೆಯ ದೃಶ್ಯಗಳನ್ನು ಆ ವ್ಯಕ್ತಿಗೆ ರವಾನಿಸಿರುವುದು ಕಂಡುಬಂದಿತ್ತು ಎಂದು ಭದ್ರತಾಪಡೆ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *