ನವದೆಹಲಿ : ಉಲ್ಬಣವಾಗುತ್ತಿರುವ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಯ ಮೇರೆಗೆ, ಇಂದಿನಿಂದ ಭಾರತದಾದ್ಯಂತ ನಾಲ್ಕು ದಿನಗಳ “ಟೀಕಾ ಉತ್ಸವ್” ಅರ್ಥಾತ್ ‘ಲಸಿಕೆ ಉತ್ಸವ’ ಆರಂಭವಾಗುತ್ತಿದೆ. ಈ ಸಮಯದಲ್ಲಿ ಸಾಮೂಹಿಕ ಲಸಿಕಾ ಕಾರ್ಯಕ್ರಮದ ಮೂಲಕ ಅತಿ ಹೆಚ್ಚು ಸಂಖ್ಯೆಯಲ್ಲಿ ಅರ್ಹ ವಯೋಮಾನದ ಜನರಿಗೆ ಕರೊನಾ ಲಸಿಕೆ ನೀಡುವ ಉದ್ದೇಶವಿದೆ.
“ಏಪ್ರಿಲ್ 11 ರಿಂದ 14 ಅನ್ನು ಟೀಕಾ ಉತ್ಸವವಾಗಿ ನಾವು ಆಚರಿಸಬಹುದೇ ? ಈ ಸಮಯದಲ್ಲಿ ಒಂದೂ ಲಸಿಕೆಯನ್ನು ವ್ಯರ್ಥ ಮಾಡದೆ ಎಷ್ಟು ಸಾಧ್ಯವೋ ಅಷ್ಟೂ ಅರ್ಹ ಜನರಿಗೆ ಲಸಿಕೆ ನೀಡಬೇಕು” ಎಂದು ಇತ್ತೀಚೆಗೆ ನಡೆದ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಮೋದಿ ಪ್ರಸ್ತಾವನೆ ಇಟ್ಟಿದ್ದರು.
ಇದನ್ನೂ ಓದಿ: ಮತದಾನ ನಡೆದ ಕೆಲವೇ ದಿನಗಳಲ್ಲಿ ತಮಿಳುನಾಡಿನ ಕಾಂಗ್ರೆಸ್ ಅಭ್ಯರ್ಥಿ ಕರೊನಾಗೆ ಬಲಿ..!
ಕರ್ನಾಟಕದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಲಸಿಕೆಯು ಕರೊನಾ ವೈರಸ್ ವಿರುದ್ಧ ಹೋರಾಡಲು ಅತಿದೊಡ್ಡ ಶಸ್ತ್ರವಾಗಿದೆ ಎಂದಿದ್ದು, ಅರ್ಹ ವಯೋಮಾನದ ಜನರೆಲ್ಲಾ ಲಸಿಕೆ ಪಡೆಯಬೇಕೆಂದು ಕರೆ ನೀಡಿದ್ದಾರೆ.
ಉತ್ತರಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯಗಳು ಈ ಸಮಯದಲ್ಲಿ ದುಪ್ಪಟ್ಟು ಪ್ರಮಾಣದಲ್ಲಿ ಲಸಿಕೆ ನೀಡಲು ಸಿದ್ಧತೆ ನಡೆಸಿವೆ. ಉ.ಪ್ರ.ದಲ್ಲಿ 6,000 ಲಸಿಕಾ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲರು ಲಸಿಕಾಕರಣದ ಬಗ್ಗೆ ವೆಬಿನಾರ್ಗಳನ್ನು ನಡೆಸಲಿದ್ದಾರೆ. ‘ಟೀಕಾ ಉತ್ಸವ್’ ಸಮಯದಲ್ಲಿ ಬಿಹಾರದಲ್ಲಿ ನಾಲ್ಕು ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಇದೆ. ಇದಕ್ಕಾಗಿ ಜನರು ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು ಎಂದು ಸಿಎಂ ನಿತೀಶ್ ಕುಮಾರ್ ಕರೆ ನೀಡಿದ್ದಾರೆ.
ಇದನ್ನೂ ಓದಿ: ರೇವ್ ಪಾರ್ಟಿ ಮೇಲೆ ದಾಳಿ: ನೂರಕ್ಕೂ ಹೆಚ್ಚು ಯುವಕ-ಯುವತಿಯರನ್ನು ವಶಕ್ಕೆ ಪಡೆದ ಹಾಸನ ಪೊಲೀಸರು!
ಈ ಮಧ್ಯೆ, ಪಂಜಾಬ್, ರಾಜಾಸ್ತಾನ್, ಮಹಾರಾಷ್ಟ್ರ, ಝಾರ್ಖಂಡ್, ದೆಹಲಿ ಸಿಎಂಗಳು ತಮ್ಮ ಲಸಿಕೆಯ ಸ್ಟಾಕ್ ಖಾಲಿಯಾಗುತ್ತಿದೆ ಎಂದು ಎಚ್ಚರಿಸಿವೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಲಸಿಕೆಯನ್ನು ಸಮರ್ಪಕವಾಗಿ ಬಳಸಬೇಕು ಎಂದು ತಾಕೀತು ಮಾಡಿದ್ದು, ಮುಂದೆ ಏನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಾದುನೋಡಬೇಕಾಗಿದೆ. (ಏಜೆನ್ಸೀಸ್)
“ಕರೊನಾ ಲಸಿಕೆ ರಫ್ತು ಕೂಡಲೇ ನಿಲ್ಲಿಸಿ” : ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಪತ್ರ
ಕರೊನಾ : ಸಕ್ರಿಯ ಪ್ರಕರಣಗಳಲ್ಲಿ ಇವು ಟಾಪ್ ಟೆನ್ ಜಿಲ್ಲೆಗಳು