ಬೆಂಗಳೂರು: ಚಿತ್ರ ನಟಿ ಸಂಜನಾ ಗಲ್ರಾನಿ ಮತ್ತು ನಿರ್ಮಾಪಕಿ ವಂದನಾ ಜೈನ್ ನಡುವೆ ಪಬ್ನಲ್ಲಿ ಗಲಾಟೆ ನಡೆದಿದೆ ಎನ್ನಲಾದ ಪ್ರಕರಣ ಮತ್ತಷ್ಟು ತಾರಕಕ್ಕೇರಿದೆ.
ಮಾಧ್ಯಮಗಳ ಮುಂದೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ನಟಿ ಸಂಜನಾ ವಿರುದ್ಧ ವಂದನಾ 4 ಕೋಟಿ ರೂ.ಗೆ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ.
ಪಬ್ನಲ್ಲಿ ನಡೆದ ಗಲಾಟೆ ವೇಳೆ ಹೊಡೆದಿದ್ದಾರೆ. ಇದರಿಂದ ನನ್ನ ಕಣ್ಣಿಗೆ ಗಾಯವಾಗಿತ್ತು. ಈ ಕುರಿತು ಪೊಲೀಸರಿಗೆ ದೂರು ಕೊಟ್ಟಿದ್ದೆ. ದೂರಿನ ಬಗ್ಗೆ ಸುದ್ದಿ ಪ್ರಸಾರವಾದಾಗ ಸಂಜನಾ ನನ್ನ ಮೇಲೆ ನಿರಾಧಾರ ಆರೋಪ ಮಾಡಿದ್ದಾರೆ. ನನ್ನ ವೈಯಕ್ತಿಕ ವಿಚಾರಗಳನ್ನು ಬಹಿರಂಗವಾಗಿ ಮಾತನಾಡಿ ಅವಮಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಜನಾ ವಿರುದ್ಧ 4 ಕೋಟಿ ರೂ.ಗೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಈಗಾಗಲೇ ಸ್ಪಷ್ಟನೆ ಕೇಳಿ ಸಂಜನಾಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ ಎಂದು ವಂದನಾ ಹೇಳಿದ್ದಾರೆ.
ಏನಿದು ಪ್ರಕರಣ?: ಡಿ.24ರ ರಾತ್ರಿ ಸಂಜನಾ ಮತ್ತು ವಂದನಾ ಹೋಟೆಲ್ವೊಂದರಲ್ಲಿ ನಡೆದಿದ್ದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳಲ್ಲಿ ನಿಂದಿಸಿಕೊಂಡಿದ್ದರು.
ಇಬ್ಬರ ನಡುವಿನ ಜಗಳ ಕಬ್ಬನ್ಪಾರ್ಕ್ ಠಾಣೆ ಮೆಟ್ಟಿಲೇರಿತ್ತು. ಅಂತಾರಾಷ್ಟ್ರೀಯ ಕ್ರಿಕೆಟಿಗನ ಜತೆ ವಂದನಾ ಜೈನ್ ಒಡನಾಟ ಇಟ್ಟುಕೊಂಡಿದ್ದಳು. ಹಾಗಾಗಿ ಕೋಟ್ಯಂತರ ರೂ. ಗಳಿಸಿದ್ದಾಳೆ. ಮದುವೆ ಕುರಿತು ಆತನನ್ನು ಬೆದರಿಸಿದ್ದಳು ಎಂದು ಸಂಜನಾ ಆರೋಪಿಸಿದ್ದರು.