ನಾಲ್ಕು ಜಾನುವಾರು ರಕ್ಷಣೆ

ವಿಜಯವಾಣಿ ಸುದ್ದಿಜಾಲ ಅಕ್ಕಿಆಲೂರ

ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಆಕಳುಗಳನ್ನು ರಕ್ಷಿಸಿದ ಪಟ್ಟಣದ ಹಿಂದು ಪರ ಸಂಘಟನೆ ಕಾರ್ಯಕರ್ತರು ಮಂಗಳವಾರ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಗೋ ಶಾಲೆಗೆ ಹಸ್ತಾಂತರಿಸಿದರು.

ಪಟ್ಟಣದ ಚನ್ನವೀರೇಶ್ವರ ಮಾರುಕಟ್ಟೆಯಲ್ಲಿ ನಡೆಯುವ ಜಾನುವಾರ ಸಂತೆಯಿಂದ ಕಸಾಯಿಖಾನೆಗೆ ಸಾಗಿಸಲು ಮಾರುಕಟ್ಟೆ ಹಿಂಭಾಗದ ಹೊಲವೊಂದರಲ್ಲಿ ನಾಲ್ಕು ಜಾನುವಾರು ಕಟ್ಟಲಾಗಿತ್ತು. ಇದನ್ನರಿತ ಸ್ಥಳೀಯ ಹಿಂದು ಯುವ ಸೇನೆ ಕಾರ್ಯಕರ್ತರು ಅವುಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಆಗ ಕಸಾಯಿಖಾನೆಗೆ ತೆಗೆದುಕೊಂಡು ಹೊರಡಲು ಮುಂದಾಗಿದ್ದ ಕೆಲವರು ಜಾನುವಾರುಗಳನ್ನು ಅಲ್ಲೇ ಬಿಟ್ಟು ಕಾಲ್ಕಿತ್ತಿದ್ದಾರೆ.

ನಂತರ ಪಿಎಸ್​ಐ ವೀರೇಶ ಮತ್ತು ಸ್ಥಳೀಯ ಗ್ರಾ.ಪಂ. ಒಪ್ಪಿಗೆ ಮೇರೆಗೆ ಸಮೀಪದ ಇನಾಂಲಕ್ಮಾಪುರ ಗ್ರಾಮದ ವಿಶ್ವ ಹಿಂದು ಪರಿಷತ್ ಗೋ ಶಾಲೆಯಲ್ಲಿ ಬಿಡಲಾಯಿತು. ‘ಕಾನೂನು ಬಾಹಿರವಾಗಿ ಜಾನುವಾರು ಕಸಾಯಿಖಾನೆಗೆ ಕೊಂಡೊಯ್ಯು ತ್ತಿದ್ದರಿಂದ ಅವುಗಳನ್ನು ರಕ್ಷಿಸಿದ್ದೇವೆ. ಪಟ್ಟಣದಲ್ಲಿ ಅಕ್ರಮ ಕಸಾಯಿಖಾನೆ ಹೆಚ್ಚುತ್ತಿದ್ದು, ಅಧಿಕಾರಿಗಳು ಅವುಗಳ ನಿಯಂತ್ರ ಣಕ್ಕೆ ಮುಂದಾಗಬೇಕು ಎಂದು ಹಿಂದು ಪರ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದರು.

‘ಜಾನುವಾರು ಯಾರಿಗೆ ಸೇರಿವೆ ಎಂಬುದು ಗೊತ್ತಿಲ್ಲ. ಅವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎನ್ನುವುದಕ್ಕೆ ಸಾಕ್ಷಿ ದೊರೆತಿಲ್ಲ. ಜಾನುವಾರು ಮಾಲೀಕರು ಯಾರೆಂದು ತಿಳಿಯುವವರೆಗೂ ಅವುಗಳನ್ನು ಗೋ ಶಾಲೆಯಲ್ಲಿ ಇಡಲಾಗುವುದು ಎಂದು ಪಿಎಸ್​ಐ ವೀರೇಶ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಅಕ್ರಮ ಗೋ ಸಾಗಣೆ ತಡೆದವರ ಮೇಲೆ ಹಲ್ಲೆ:ಅಕ್ರಮವಾಗಿ ಗೋ ಸಾಗಾಣಿಕೆ ಮಾಡುತ್ತಿರುವುದನ್ನು ತಡೆಯಲು ಹೋದ ಹಿಂದುಪರ ಸಂಘಟನೆ ಕಾರ್ಯಕರ್ತರ ಮೇಲೆ ಕಟುಕರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹಾವೇರಿ ಶಿವಬಸವನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ನಗರದ ನಿವಾಸಿಗಳಾದ ವರುಣ ಆನವಟ್ಟಿ, ಹರೀಶ ಮಡಿವಾಳರ, ಮನೋಜ ಜಾಧವ, ಷಣ್ಮುಖ ನೀರಲಗಿ, ಪ್ರವೀಣ ಮಡಿವಾಳರ ಹಲ್ಲೆಗೊಳಗಾದವರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವನನ್ನು ಕಿಮ್್ಸ ಆಸ್ಪತ್ರೆಗೆ ರವಾನಿಸಲಾಗಿದೆ. ಶಿವಬಸವನಗರದಲ್ಲಿರುವ ಕಸಾಯಿಖಾನೆಗೆ ಟಾಟಾಏಸ್ ವಾಹನದಲ್ಲಿ ಗೋವು ಮತ್ತು ಎಮ್ಮೆಗಳನ್ನು ಸಾಗಿಸಲಾಗುತ್ತಿತ್ತು. ಇದನ್ನು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ತಡೆಯಲು ಮುಂದಾದಾಗ, ಬಡಿಗೆ ಹಾಗೂ ಕಬ್ಬಿಣದ ರಾಡ್​ಗಳಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *