ಮಂಡ್ಯ ಲೋಕಸಭೆ ಕ್ಷೇತ್ರ: ನಾಲ್ಕು ನಾಮಪತ್ರ ವಾಪಸ್​, ಕಣದಲ್ಲಿ ಉಳಿದ ಸುಮಲತೆಗಳು

ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದ ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದ್ದ ಶುಕ್ರವಾರ ನಾಲ್ವರು ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದು, ಅಂತಿಮವಾಗಿ ಸುಮಲತಾ ಹೆಸರಿನ ಮೂವರು ಮಹಿಳೆಯರು ಸೇರಿದಂತೆ 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕರುನಾಡು ಪಕ್ಷದ ಎಚ್​.ಕೆ. ಕೃಷ್ಣ, ಪಕ್ಷೇತರ ಅಭ್ಯರ್ಥಿಗಳಾದ ಕೆ. ಉದಯಕುಮಾರ್​, ಎನ್​.ಪಿ. ಸುರೇಶ್​ ಮತ್ತು ಜಿ.ಬಿ. ನವೀನ್​ ಕುಮಾರ್​ ನಾಮಪತ್ರ ವಾಪಸ್​ ಪಡೆದಿದ್ದಾರೆ.

ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಷ್​ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಬಿಜೆಪಿ ಬೆಂಬಲ ಘೋಷಿಸಿದೆ. ಜೆಡಿಎಸ್​ ಮತ್ತು ಕಾಂಗ್ರೆಸ್​ ಅಭ್ಯರ್ಥಿಯಾಗಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್​ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಾರ್ಪಟ್ಟಿದೆ.