ಗುಹೆ ದಾಟಿ ಸಾವು ಗೆದ್ದ ಆರು ಮಕ್ಕಳು

ಫೆಚಾಬುರಿ(ಥಾಯ್ಲೆಂಡ್): ಮಳೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಗುಹೆಯೊಳಗೆ ಸಿಲುಕಿಕೊಂಡು 15 ದಿನಗಳಿಂದ ಸಾವು, ಬದುಕಿನ ನಡುವೆ ಹೋರಾಡುತ್ತಿದ್ದ ಥಾಯ್ಲೆಂಡ್​ನ 12 ಬಾಲಕರು ಮತ್ತು ಕೋಚ್ ಪೈಕಿ 6 ಜನರು ಸಾವು ಗೆದ್ದು ಬಂದಿದ್ದಾರೆ. ಭಾನುವಾರ ಬೆಳಗ್ಗೆ ಆರಂಭಗೊಂಡ ಅತಿ ಕಠಿಣ ರಕ್ಷಣಾ ಕಾರ್ಯಾಚರಣೆಯಲ್ಲಿ 13 ವಿದೇಶಿ ಈಜುಗಾರರು ಹಾಗೂ ಐವರು ಥಾಯ್ ನೇವಿ ಸೀಲ್ಸ್ ತಂಡದ ಸದಸ್ಯರು 6 ಮಕ್ಕಳನ್ನು ರಕ್ಷಿಸಿ ಹೊರತಂದಿದ್ದಾರೆ.

ಧಾರಾಕಾರ ಮಳೆಯಿಂದಾಗಿ ನೀರು ತುಂಬಿಕೊಂಡಿದ್ದ ಉತ್ತರ ಶಿಯಾಂಗ್ ರೈ ಪ್ರಾಂತ್ಯದ ಥಾಮ್ ಲುಯಾಂಗ್ ಗುಹೆಯಲ್ಲಿ ಸಿಲುಕಿದ್ದವರಲ್ಲಿ ದೈಹಿಕವಾಗಿ ದುರ್ಬಲರಾಗಿದ್ದ ಆರು ಬಾಲಕರನ್ನು ಭಾನುವಾರ ರಾತ್ರಿ ಹೊರಕ್ಕೆ ಕರೆತಂದು ಸೇನಾ ಹೆಲಿಕಾಪ್ಟರ್ ಮೂಲಕ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 50 ವಿದೇಶಿ ಡೈವರ್ಸ್, 40 ಥಾಯ್ ಡೈವರ್ಸ್​ಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ.

ನಿರ್ಣಾಯಕ ದಿನ ಎಂದೇ ಬಿಂಬಿಸಲಾಗಿದ್ದ ಭಾನುವಾರದ ಕಾರ್ಯಾಚರಣೆ ನಿರೀಕ್ಷೆಗಿಂತ ಹೆಚ್ಚು ಸಫಲವಾಗಿದೆ. ಉಳಿದವರನ್ನು ಸೋಮವಾರ ಹೊರತರುತ್ತೇವೆ ಎಂದು ಗವರ್ನರ್ ನರೊಂಗ್​ಸಾಕ್ ಒಸೊಟ್ಟನಾ ಕೊರ್ನ್ ತಿಳಿಸಿದ್ದಾರೆ.

ಇಳಿದ ನೀರಿನ ಮಟ್ಟ

ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣ ಇಳಿದಿರುವುದರಿಂದ ಮೋಟಾರ್ ಪಂಪ್ ಬಳಸಿ ಗುಹೆಯಿಂದ ನೀರನ್ನು ಹೊರ ಹಾಕಿದ್ದರಿಂದಾಗಿ ಕಾರ್ಯಾಚರಣೆ ಸಾಧ್ಯವಾಯಿತು. ಗುಹೆಯ ಪ್ರವೇಶ ದ್ವಾರದಿಂದ ಮಕ್ಕಳು ಸಿಲುಕಿಕೊಂಡ ಜಾಗ 4.5 ಕಿ.ಮೀ ದೂರವಿದೆ. ಮಧ್ಯೆ ಆಳವಾದ ಇಳಿಜಾರಿನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಶೇಖರಣೆಯಾಗಿತ್ತು. ಒಬ್ಬ ವ್ಯಕ್ತಿಗೆ ಕೈಕಾಲು ಬಡಿಯಲೂ ಆಗದ ಇಕ್ಕಟ್ಟಿನ ಜಾಗಗಳ ನಡುವೆ ಬಾಲಕರನ್ನು ಹೊರಕ್ಕೆ ಕರೆತರಬೇಕಾಗಿದೆ.

ಆ ಹದಿನೈದು ದಿನ…

ಜೂನ್ 23ರಂದು ಫುಟ್ಬಾಲ್ ಪಂದ್ಯದ ಅಭ್ಯಾಸ ಬಳಿಕ ಬಾಲಕನೊಬ್ಬನ ಜನ್ಮದಿನವನ್ನು ಆಚರಿಸಲು 11ರಿಂದ 16 ವರ್ಷದ 12 ಮಂದಿ ಬಾಲಕರ ತಂಡ ಕೋಚ್ ಜತೆಗೆ ಥಾಮ್ ಲುಯಾಂಗ್ ಗುಹೆಗೆ ತೆರಳಿತ್ತು. ಮ್ಯಾನ್ಮಾರ್ ಗಡಿಯಲ್ಲಿರುವ ಪರ್ವತದ ಕೆಳಗಿನ ಕಿರಿದಾದ ಗುಹೆ ಸ್ಥಳೀಯವಾಗಿ ಪ್ರಮುಖ ಪ್ರವಾಸಿ ತಾಣ.

ಈ ಸಂದರ್ಭ ಧಾರಾಕಾರ ಮಳೆ ಸುರಿದ ಕಾರಣ ಗುಹೆಯೊಳಗೆ ಭಾರಿ ನೀರು ಹರಿದಿತ್ತು. ಪ್ರವಾಹದಂತ ಪರಿಸ್ಥಿತಿ ಎದುರಾಗುವ ಆತಂಕದಿಂದ ಬಾಲಕರು ಮತ್ತು ಕೋಚ್ ಗುಹೆಯೊಳಗೆ 4.5 ಕಿ.ಮೀ ದೂರ ಕ್ರಮಿಸಿ ಬಂಡೆ ಮೇಲೆ ಆಶ್ರಯ ಪಡೆದಿದ್ದಾರೆ. ಮಕ್ಕಳು ಹಿಂದಿರುಗದ್ದರಿಂದ ಆತಂಕಗೊಂಡ ಪಾಲಕರು ಪೊಲೀಸರಿಗೆ ದೂರು ನೀಡಿದಾಗ ಗುಹೆಯೊಳಗೆ ಸಿಲುಕಿದ್ದು ತಿಳಿದುಬಂದಿತ್ತು.