Tuesday, 11th December 2018  

Vijayavani

Breaking News

4 ವಾರದಲ್ಲಿ ಕಾವೇರಿ ಅಂತಿಮ ತೀರ್ಪು

Wednesday, 10.01.2018, 3:04 AM       No Comments

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿಚಾರ ರಾಜ್ಯದಲ್ಲಿ ರಾಜಕೀಯ ಕಚ್ಚಾಟಕ್ಕೆ ವೇದಿಕೆಯಾಗಿರುವ ಬೆನ್ನಲ್ಲೇ, ಕರ್ನಾಟಕ ಹಾಗೂ ತಮಿಳುನಾಡು ನಡುವಿನ 2 ದಶಕಗಳ ಕಾವೇರಿ ಕಾನೂನು ಹೋರಾಟಕ್ಕೆ ಸಂಬಂಧಿಸಿದ ಅಂತಿಮ ತೀರ್ಪನ್ನು ಮುಂದಿನ 4 ವಾರದೊಳಗೆ ಪ್ರಕಟಿಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.

ಇದರೊಂದಿಗೆ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕೋರ್ಟ್ ತೀರ್ಪು ಆಧರಿಸಿದ ಮತ್ತೊಂದು ‘ಜಲ ರಾಜಕೀಯ’ ಹೋರಾಟಕ್ಕೆ ರಾಜ್ಯ ಅಣಿಯಾಗುವುದು ಬಹುತೇಕ ನಿಶ್ಚಿತವಾಗಿದ್ದು, ತೀರ್ಪು ಹೇಗೆ ಬಂದರೂ ಹಳೇ ಮೈಸೂರು ಭಾಗದಲ್ಲಿ ರಾಜಕೀಯ ತಲ್ಲಣ ಮೂಡುವುದು ಸ್ಪಷ್ಟವಾಗಿದೆ.

ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಕುರಿತ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಕಾವೇರಿ ನದಿ ನೀರು ತೀರ್ಪಿನ ಬಗ್ಗೆ ಉಲ್ಲೇಖಿಸಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಈ ವಿಷಯ ಕಳೆದ 2 ದಶಕಗಳಿಂದ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ. ಮುಂದಿನ 4 ವಾರದೊಳಗೆ ಕಾವೇರಿ ವಿವಾದದ ತೀರ್ಪು ನೀಡಲಾಗುವುದು ಎಂದು ಘೋಷಿಸಿದರು. 2017ರ ಸೆ.20ರಂದು ಅರ್ಜಿ ವಿಚಾರಣೆ ಅಂತ್ಯಗೊಳಿಸಿ ತೀರ್ಪು ಕಾಯ್ದಿರಿಸಲಾಗಿತ್ತು.

 ಮಂಡಳಿಗೆ ರಾಜ್ಯ ವಿರೋಧವೇಕೆ?

# ಮಂಡಳಿ ಸ್ಥಾಪನೆಯಾದಲ್ಲಿ ಇದುವರೆಗೆ ರಾಜ್ಯದ ಸುಪರ್ದಿಯಲ್ಲಿದ್ದ ಜಲಾಶಯಗಳು ಮಂಡಳಿ ನಿಯಂತ್ರಣಕ್ಕೆ ಹೋಗುತ್ತವೆ.

# ಸಂಕಷ್ಟ ವರ್ಷದಲ್ಲಿ ಮಂಡಳಿ ಸೂಚಿಸಿದಷ್ಟು ಪ್ರಮಾಣದ ನೀರನ್ನು ಕರ್ನಾಟಕ ತಮಿಳುನಾಡಿಗೆ ಹರಿಸಲೇಬೇಕಾಗುತ್ತದೆ.

# ಕಾವೇರಿ ಕಣಿವೆಯ ಕಾಲುವೆ, ನಾಲೆ, ಕೆರೆಕಟ್ಟೆಗಳಿಗೆ ನೀರು ಹರಿಸಬೇಕಿದ್ದರೂ ಮಂಡಳಿ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.

# ನಾಲ್ಕೂ ಕಣಿವೆ ರಾಜ್ಯಗಳಲ್ಲಿ ಯಾವ ಬೆಳೆಗೆ ಎಷ್ಟು ನೀರು? ಯಾವ ಪ್ರದೇಶದಲ್ಲಿ ಯಾವ ಬೆಳೆ ಬೆಳೆಯಬೇಕು? ಕೃಷಿ ಮತ್ತು ಕುಡಿವ ಉದ್ದೇಶಕ್ಕೆ ಬಿಡಬೇಕಾದ ನೀರಿನ ಪ್ರಮಾಣ ನಿಗದಿ ಜತೆಗೆ ಕಣಿವೆಯಾಚೆಗಿನ ಪ್ರದೇಶಕ್ಕೆ ಅಕ್ರಮವಾಗಿ ನೀರು ಹರಿಸುವುದಕ್ಕೆ ಮಂಡಳಿಯಿಂದ ಕಡಿವಾಣ ಬೀಳಲಿದೆ.

ಮಂಡಳಿಯಲ್ಲಿ ಯಾರಿರುತ್ತಾರೆ?

ಕೇಂದ್ರ ಜಲ ಸಂಪನ್ಮೂಲ ಇಲಾಖೆ, ಜಲ ಆಯೋಗ ಸೇರಿ ಕೇಂದ್ರ ಸರ್ಕಾರದ ಉನ್ನತಾಧಿಕಾರಿಗಳು, ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ರಾಜ್ಯಗಳ ಓರ್ವ

ಪ್ರತಿನಿಧಿಗೆ ಅವಕಾಶ.

ಮಂಡಳಿ ಸ್ವರೂಪ, ಕಾರ್ಯನಿರ್ವಹಣೆ, ಜವಾಬ್ದಾರಿಗಳ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಅಥವಾ ಸಂಸತ್​ನಲ್ಲಿ ರೂಪುಗೊಳ್ಳುವ ಕಾನೂನಿನಲ್ಲಿ ಸ್ಪಷ್ಟನೆ.

ಮಂಡಳಿಯಿಂದ ಲಾಭವೇನು?

# ತಮಿಳುನಾಡು ಸೇರಿ ಎಲ್ಲ ರಾಜ್ಯಗಳ ಕಾವೇರಿ ರಾಜಕೀಯಕ್ಕೆ ತೆರೆ ಬೀಳಲಿದೆ

# ಚುನಾವಣೆ ಬಂದ ಕೂಡಲೇ ಕಾವೇರಿ ವಿಚಾರದಲ್ಲಿ ನಡೆಯುವ ಗದ್ದಲ ಅಂತ್ಯವಾಗಬಹುದು

# ರಾಜ್ಯ ಸರ್ಕಾರಗಳು ಭಾವನಾತ್ಮಕ ವಿಷಯ ನಿಭಾಯಿಸುವ ಸಂದಿಗ್ಧದಿಂದ ಬಚಾವಾಗಬಹುದು

# ತುಂಗಭದ್ರಾ ಸೇರಿ ಇತರ ನದಿಗಳ ನೀರು ಹಂಚಿಕೆ ವಿಚಾರದಲ್ಲಿ ಇರುವ ಸ್ಪಷ್ಟನೆಯೂ ಇದಕ್ಕೆ ಬರಲಿದೆ

ಮಂಡಳಿ ರಚನೆ ಹೇಗೆ?

# ನಿರ್ವಹಣಾ ಮಂಡಳಿಗೆ ಕೇಂದ್ರದಿಂದ ಅಧ್ಯಕ್ಷರ ನೇಮಕ

# ಇಬ್ಬರು ಪೂರ್ಣಾವಧಿ ಸದಸ್ಯರ ನಿಯೋಜನೆ

# ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಿಂದ ತಲಾ ಒಬ್ಬರ ನೇಮಕ

# ಬರಗಾಲದ ಸಂದರ್ಭದಲ್ಲಿ ಮಾಹಿತಿ ಸಂಗ್ರಹ

# ಮಂಡಳಿ ಸದಸ್ಯರಿಂದ ಕೇಂದ್ರಕ್ಕೆ ವರದಿ ಸಲ್ಲಿಕೆ

# ವರದಿ ಆಧರಿಸಿ ನಾಲ್ಕೂ ರಾಜ್ಯಗಳಿಗೆ ನೀರು ಲಭ್ಯತೆ\

ಮಂಡಳಿ ರಚನೆ?

ತೀರ್ಪು ಕಾಯ್ದಿರಿಸುವಾಗ ನ್ಯಾಯ ಮಂಡಳಿ ರಚನೆ ಸಾಧ್ಯತೆಯ ಸುಳಿವನ್ನು ನ್ಯಾಯಪೀಠ ನೀಡಿರುವುದರಿಂದ ಕುತೂಹಲ ಕೆರಳಿದೆ. ಕಾವೇರಿ ಜಲ ಹಂಚಿಕೆ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನೀರು ನಿರ್ವಹಣೆ ಮಂಡಳಿ ರಚನೆ ಮಾಡುವುದು ಸೂಕ್ತ. ಇದರ ಸ್ವರೂಪ ಹೇಗಿರಬೇಕು ಎಂಬುದನ್ನು ನಾವು ತೀರ್ವನಿಸುತ್ತೇವೆ ಎಂದು ಪೀಠ ಅಭಿಪ್ರಾಯಪಟ್ಟಿತ್ತು.

ಫೆಬ್ರವರಿಗೆ ತೀರ್ಪ?

ಫೆಬ್ರವರಿ ಅಂತ್ಯಕ್ಕೆ ಹಾಲಿ ಮುಖ್ಯ ನ್ಯಾಯಮೂರ್ತಿ ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿ ಮೊದಲ ವಾರದಲ್ಲಿಯೇ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

Back To Top