ಹುಣಸೂರು: ತಾಲೂಕಿನ ರತ್ನಪುರಿ ಗ್ರಾಮದಲ್ಲಿ ಕೋಮು ಸಾಮರಸ್ಯಕ್ಕೆ ಹೆಸರಾದ ಶ್ರೀ ಆಂಜನೇಯಸ್ವಾಮಿ ಪಲ್ಲಕ್ಕಿ ಉತ್ಸವ ಮತ್ತು ಜಮಾಲ್ ಬೀ ಅಮ್ಮನವರ ಉರುಸ್ (ಗಂಧೋತ್ಸವ)ನ ಮೂರನೇ ದಿನದ ಗಂಧೋತ್ಸವ ಕಾರ್ಯಕ್ರಮ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಭಾನುವಾರ ಸಂಜೆ ಹುಣಸೂರಿನ ಧರ್ಮ ಗುರು ಮುರ್ಷದ್ ನೇತೃತ್ವದಲ್ಲಿ ಪಕ್ಕದ ಗ್ರಾಮಗಳಾದ ಕುಡೀನೀರು ಮುದ್ದನಹಳ್ಳಿ, ಹುಣಸೂರಿನಿಂದ ಗಂಧವನ್ನು ಮೆರವಣಿಗೆಯಲ್ಲಿ ತಂದು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಇಸ್ಲಾಂ ಧರ್ಮ ಗುರುಗಳು ಹಾಗೂ ಹರಕೆ ಹೊತ್ತ ಭಕ್ತರು ಕಬ್ಬಿಣದ ಅಯುಧಗಳಿಂದ ಮೈಗೆ ಚುಚ್ಚಿಕೊಂಡು ಭಕ್ತರಲ್ಲಿ ಆಚ್ಚರಿ ಮೂಡಿಸಿದರು. ಜಮಾಲ್ ಬೀಬೀ ದರ್ಗಾದಲ್ಲಿ ಹಿಂದು ಧರ್ಮದವರು ಚಾದರ್ ಹೊದಿಸಿ ಹರಕೆ ಸಲ್ಲಿಸಿದರು.
ಹರಕೆ ಹೊತ್ತ ಮುಸ್ಲಿಂರು ಹಾಗೂ ಹಿಂದುಗಳು ಸಿಹಿ ಬೂಂದಿ ಹಾಗೂ ಹೂಗಳನ್ನು ಜಮಾಲ್ ಬೀ ಅಮ್ಮನ ಸನ್ನಿಧಾನಕ್ಕೆ ಸಲ್ಲಿಸಿ ಹರಕೆ ತೀರಿಸುವುದು ಇಲ್ಲಿನ ವಾಡಿಕೆ. ಹರಕೆ ಹೊತ್ತ ಹಿಂದು ಮಹಿಳೆಯರು ಕೂಡ ಹೂ, ಸಿಹಿಬೂಂದಿ ಅಂಗಡಿಗಳ ಹತ್ತಿರ ಸರತಿ ಸಾಲಿನಲ್ಲಿ ನಿಂತು ಖರೀದಿಸಿ ಹರಕೆ ತೀರಿಸಿದರು.
ಕುಡಿನೀರು ಮುದ್ದನಹಳ್ಳಿ, ಹಳ್ಳದಕೊಪ್ಪಲು ನಂಜಾಪುರ, ಗೌರಿಪುರ, ಸಿಬಿಟಿ ಕಾಲೋನಿ, ಧರ್ಮಾಪುರ, ಸಂತೆಕೆರೆಕೊಡಿ, ತರಿಕಲ್ಲು, ಗದ್ದಿಗೆ, ಉದ್ದೂರು, ವಿನೋಬಾ ಕಾಲನಿ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು.
ಗಂಧೋತ್ಸವದಲ್ಲಿ ಜಾಮಿಯ ಕಮಿಟಿ ಅಧ್ಯಕ್ಷ ಎಸ್.ಪಿ.ಚಾಂದ್, ಕಾರ್ಯದರ್ಶಿ ಇರ್ಷಾದ್ ಅಲಿ ಖಾನ್, ಮುಂಖಡರಾದ ಅಜ್ಗರ್ ಪಾಷ, ವಿಜೇಂದ್ರಕುಮಾರ್, ನೂರ್ ಅಹಮದ್, ಬಷಿರ್ ಅಹಮದ್, ಅನ್ವರ್ ಪಾಷ, ಸಾದಿಕ್, ಮಹಮದ್ ಚಾಂದ್ ಇತರರಿದ್ದರು.