ಕೆ.ಎಂ.ದೊಡ್ಡಿ: ಪಟ್ಟಣದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ 3ನೇ ವಾರ್ಷಿಕ ಮಹೋತ್ಸವ ಮತ್ತು ಹರಿಸೇವೆ ಕಾರ್ಯಕ್ರಮವನ್ನು ಶನಿವಾರ (ಜೂ.14) ಹಮ್ಮಿಕೊಳ್ಳಲಾಗಿದ್ದು, ಅಗತ್ಯ ಸಿದ್ಧತೆಗಳು ನಡೆಯುತ್ತಿವೆ.
ಗ್ರಾಮದ ಶ್ರೀ ವೆಂಕಟೇಶ್ವರಸ್ವಾಮಿ ಹಾಗೂ ಹೊಸಕೆರೆ ಶ್ರೀ ಮಾಸ್ತಮ್ಮ ದೇವರ ಒಕ್ಕಲಿಗ ಕುಲಬಾಂಧವರು ಈ ದೇವಾಲಯ ನಿರ್ಮಿಸಿ 3 ವರ್ಷಗಳಾಗಿವೆ. ಅದರ ಅಂಗವಾಗಿ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.
ಪೂಜಾ ಕಾರ್ಯಕ್ರಮದ ನೇತೃತ್ವವನ್ನು ಮೇಲುಕೋಟೆಯ ಸ್ಥಾನಾಚಾರ್ಯ ಡಾ.ಶೆಲ್ವೆ ಪಿಳ್ಳೈ ಅಯ್ಯಂಗಾರ್ ನೇತೃತ್ವದಲ್ಲಿ ಜರುಗಲಿದ್ದು, ಪುರೋಹಿತರಾದ ಯು.ವಿ.ಗಿರೀಶ್, ಅರ್ಚಕರಾದ ಅನಂತಕೃಷ್ಣ ಭಟ್, ವೆಂಕಟೇಶ್ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಲಿದ್ದಾರೆ. ಹರಿಸೇವೆ ಅಂಗವಾಗಿ ಕೆ.ಎಂ.ದೊಡ್ಡಿ ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ವಿದ್ಯುತ್ ದೀಪಗಳಿಂದ ಕಂಗೊಳಿಸುತಿವೆ.
ಪ್ರತಿ ವರ್ಷದಂತೆ ಈ ವರ್ಷವೂ ಹರಿಸೇವೆ ಕಾರ್ಯಕ್ರಮವು ಜರುಗಲಿದ್ದು ಶುಕ್ರವಾರ ಶ್ರೀ ವೆಂಕಟೇಶ್ವರಸ್ವಾಮಿಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಪೂಜೆ, ಸಂಜೆ ಹೋಮ-ಹವನಗಳ ಕಾರ್ಯಕ್ರಮ ನಡೆದವು.
ಶನಿವಾರ ಬೆಳಗ್ಗೆ 10ಗಂಟೆಗೆ ಪ್ರಶಾಂತ್ ಶಾಲೆಯ ಸಮೀಪದಿಂದ ಜನಪದ ಕಲಾತಂಡಗಳೊಂದಿಗೆ ಹಾಗೂ ಹೂ-ಹೊಂಬಾಳೆ ಮೂಲಕ ರಥದಲ್ಲಿ ಶ್ರೀವೆಂಕಟೇಶ್ವರಸ್ವಾಮಿ ಮೆರವಣಿಗೆ ಮತ್ತು ಮಣೆಸೇವೆ ಮೂಲಕ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ.
ನಂತರ ಮಧ್ಯಾಹ್ನ 12.30ಕ್ಕೆ 15 ಸಾವಿರಕ್ಕೂ ಹೆಚ್ಚು ಭಕ್ತರು ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಟ್ರಸ್ಟ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ.