More

    ಗೋಡೆಗಳ ಅಂದ ಹೆಚ್ಚಿಸೋ 3ಡಿ ವಾಲ್ ಪೇಪರ್

    ಕೇವಲ ಇಟ್ಟಿಗೆ, ಮರಳು, ಸಿಮೆಂಟ್, ಕಬ್ಬಿಣ ಇದ್ದರೆ ಸಾಕು, ಮನೆ ಕಟ್ಟಿ ಸುಣ್ಣ ಬಳಿದರೆ ಆಯಿತು ಎನ್ನುವ ಕಾಲವಿತ್ತು. ಆದರೆ ಈಗ ಹಾಗಿಲ್ಲ. ಮನೆಕಟ್ಟಿದ ನಂತರ ಗೋಡೆಗಳಿಗೆ ಯಾವ ಬಣ್ಣ ಬಳಿಸಬೇಕು, ನೆಲಹಾಸು ಹೇಗಿರಬೇಕು, ಸೀಲಿಂಗ್ ಹೀಗೆ ಪ್ರತಿಯೊಂದರ ವಿನ್ಯಾಸವೂ ಮಹತ್ವ ಪಡೆದುಕೊಂಡಿದೆ.

    ವಿಶೇಷವಾಗಿ ಮನೆ ನಿರ್ಮಾಣ ನಂತರ ಗೋಡೆ ಅಂದಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಮನೆಯ ಗೋಡೆ ಅಂದಾಗಿ ಕಾಣುವುದರ ಜತೆಗೆ ಬಂದವರ ಗಮನ ಸೆಳೆಯುವಂತಿರಬೇಕು ಎಂದು ಬಯಸುವವರಿಗೆ ಬಹಳಷ್ಟು ಆಯ್ಕೆಗಳಿವೆ. ಕನಸಿನ ಮನೆಯ ಗೋಡೆಗಳ ಅಂದ ಹೆಚ್ಚಿಸಲು ‘ಆಕರ್ಷಕ 3ಡಿ ವಾಲ್ ಪೇಪರ್’

    ಚಿತ್ರಮಂದಿರಗಳಲ್ಲಿ 3ಡಿ ಸಿನಿಮಾ ಮಾದರಿಯಲ್ಲೇ ಈ 3ಡಿ ವಾಲ್ ಪೇಪರ್​ಗಳು ದೊರೆಯಲಿವೆ. ಇದನ್ನು ಗೋಡೆಗೆ ಅಂಟಿಸಿದಾಗ ಮೂರು ಕೋನಗಳಲ್ಲಿ ಆ ಚಿತ್ರಗಳು ಗೋಚರಿಸುತ್ತವೆ. ಆರಂಭದಲ್ಲಿ ಚಿತ್ರಮಂದಿರಗಳು, ಕಚೇರಿ, ಕೆಫೆ, ಹೋಟೆಲ್, ಆಸ್ಪತ್ರೆಗಳಲ್ಲಿ ಹೆಚ್ಚು ಬಳಕೆಯಾಗುತ್ತಿದ್ದು ವಾಲ್ ಪೇಪರ್ ಈಗ ಮನೆಯ ಒಳಾಂಗಣ ವಿನ್ಯಾಸದಲ್ಲಿ ಮಹತ್ವದ ಪಾತ್ರ ವಹಿಸಿದೆ. ಅದರಲ್ಲಿ 3ಡಿ ವಾಲ್ ಪೇಪರ್ ಬಂದ ನಂತರವಂತೂ ತಮಗೆ ಇಷ್ಟವಾದ ವಿನ್ಯಾಸಗಳನ್ನು ಆಯ್ಕೆ ಮಾಡಿಕೊಂಡು ಮನೆಯ ಅಂದ ಹೆಚ್ಚಿಸಿಕೊಳ್ಳಬಹುದಾಗಿದೆ.

    ಆಕರ್ಷಕ ಚಿತ್ರಗಳು

    ಇಂದಿನ ಡಿಜಿಟಲ್ ಯುಗದಲ್ಲಿ ವಿವಿಧ ಬಗೆಯ ಆಕರ್ಷಕ ವಾಲ್ ಪೇಪರ್​ಗಳನ್ನು ಕಾಣಬಹುದಾಗಿದೆ. ಜನರು ಅಭಿರುಚಿ, ಆಸಕ್ತಿಗೆ ಅನುಗುಣವಾಗಿ ವಾಲ್ ಪೇಪರ್​ಗಳನ್ನು ಸಿದ್ಧಪಡಿಸಿಕೊಡುವ ಸಾಮರ್ಥ್ಯ ಇಂದಿನ ಡಿಜಿಟಲ್ ಮುದ್ರಣಕ್ಕಿದೆ. ಇದರ ಜತೆಗೆ 3ಡಿ ಬಂದಿರುವುದರಿಂದ ಬೇಡಿಕೆ ಮತ್ತಷ್ಟು ಹೆಚ್ಚಿದೆ ಎನ್ನುತ್ತಾರೆ ಇಂಜಿನಿಯರುಗಳು.

    ಹಾಲ್, ಬೆಡ್ ರೂಮ್ ಬಾತ್ ರೂಮ್ ಸೇರಿ ಮನೆಯ ಎಲ್ಲ ಕೊಠಡಿಗಳಿಗೂ, ಇತರೆ ಕಟ್ಟಡಗಳ ಒಳಗೋಡೆಗಳಿಗೆ ಅನುಗುಣವಾಗಿ ಪರಿಸರ, ಪ್ರಾಣಿ, ಪಕ್ಷಿಗಳು, ಗೊಂಬೆಗಳು, ಮಕ್ಕಳ ಚಿತ್ರಗಳು ಹೀಗೆ ಹಲವು ಬಗೆಯ ಚಿತ್ರಗಳಿರುವ ವಾಲ್ ಪೇಪರ್ ಲಭ್ಯವಿದೆ.

    ವಾಲ್ ಪೇಪರ್ ವಿಧಗಳು

    ಹಿಂದೆಲ್ಲ ಒಮ್ಮೆ ಗೋಡೆಗಳು ಕೊಳೆಯಾದರೆ ಪದೇ ಪದೇ ಬಣ್ಣ ಬಳಿಸಬೇಕಾಗುತ್ತಿತ್ತು. ಆದರೆ ಇಂದು ಗೋಡೆಗಳ ಅಂದ ಹೆಚ್ಚಿಸಲು ಮಾರುಕಟ್ಟೆಗೆ ತರಹೇವಾರಿ ಬಣ್ಣಗಳು ಬಂದಿದ್ದು, ಕೊಳೆಯಾದರೆ ನೀರಿನಿಂದ ತೊಳೆದುಕೊಳ್ಳಬಹುದು. ಆದರೆ ಅದು ಬಹಳ ದುಬಾರಿ. ಅದಕ್ಕೆ ಹೋಲಿಸಿದರೆ ವಾಲ್ ಪೇಪರ್ ದರ ಕಡಿಮೆ ಇದೆ. ಜತೆಗೆ ತಮಗೆ ಬೇಕಾದ ವಿನ್ಯಾಸದಿಂದ ಗೋಡೆಯ ಅಂದ ಹೆಚ್ಚಿಸಬಹುದು ಎಂಬ ಕಾರಣಕ್ಕೆ ಹಲವರು ವಾಲ್ ಪೇಪರ್ ಆಯ್ಕೆ ಮಾಡಿಕೊಳ್ಳುತ್ತಾರೆ.

    ಕಾಗದದಿಂದ ತಯಾರಾಗುವ ಈ ವಾಲ್ ಪೇಪರ್ ತಯಾರಿಕೆಗೆ ಕೆಲ ಕಂಪನಿಗಳು ಸ್ವದೇಶಿ ಕಾಗದ ಬಳಸಿದರೆ. ಇನ್ನೂ ಕೆಲವು ವಿದೇಶಗಳಿಂದ ವಿಶೇಷ ಕಾಗದವನ್ನು ಆಮದು ಮಾಡಿಕೊಂಡು ಹೊದಿಕೆ ತಯಾರಿಸುತ್ತವೆ. ಇದನ್ನು ಗೋಡೆಗೆ ಅಂಟಿಸುವುದೂ ಸುಲಭ, ಬೇಡವೆನಿಸಿದಾಗ ತೆಗೆಯುವುದೂ ಸುಲಭ. ಒಂದೇ ಮಾದರಿ ವಿನ್ಯಾಸ ಬೇಡ ಎನ್ನಿಸಿದಾಗ ಬೇರೆ ಬೇರೆ ಮಾದರಿಯ ವಾಲ್ ಪೇಪರ್​ಗಳನ್ನು ಅಂಟಿಸಿಕೊಳ್ಳಬಹುದು.

    ಗೋಡೆಯ ಅಂದಕೆ ವಿನ್ಯಾಸ

    ಮಾರುಕಟ್ಟೆಯಲ್ಲಿ ಇಂದು ನೂರಾರು ವಾಲ್ ಪೇಪರ್ ಕಂಪನಿಗಳು ತಲೆ ಎತ್ತಿವೆ. ಹಲವು ಬಗೆಯ ವಾಲ್ ಪೇಪರ್​ಗಳ ದೊರೆಯಲಿವೆ. ಕಡಿಮೆ ದರದ ವಾಲ್ ಪೇಪರ್ ಬಳಸುವುದರಿಂದ ಆಗಾಗ್ಗೆ ಮಾದರಿಗಳನ್ನು ಬದಲಾಯಿಸಬಹುದು. ಅದೇ ರೀತಿ ದೀರ್ಘಕಾಲ ಬಾಳಿಕೆ ಬರುವ ವಾಲ್ ಪೇಪರ್​ಗಳು ಲಭ್ಯ. ಇವು ಗೋಡೆಯನ್ನು ಅಂದವಾಗಿ ಕಾಣುವಂತೆ ಮಾಡುವುದರ ಜತೆಗೆ ಗೀರುಗಳು ಬೀಳದಂತೆ, ಕಲೆಗಳು ಉಳಿದಂತೆ ತೊಳೆಯಬಹುದಾದ ವಾಲ್ ಪೇಪರ್​ಗಳು ಸಹ ವಿವಿಧ ವಿನ್ಯಾಸಗಳಲ್ಲಿ ಲಭ್ಯವಿದೆ. ಇನ್ನು 3ಡಿ ಹೊದಿಕೆ ಇದು ಗೋಡೆಯ ಅಂದ ಹೆಚ್ಚಿಸುವುದರೊಂದಿಗೆ ವಿಶೇಷ ಎಫೆಕ್ಟ್ ಸಹ ನೀಡುತ್ತವೆ. ಮನೆಯ ವಿನ್ಯಾಸದ ಬಗ್ಗೆ ವಿಶೇಷ ಕಾಳಜಿ ಹೊಂದಿರುವವರು ಅಲಂಕಾರಕ್ಕೆ ಹೆಚ್ಚು ಒತ್ತು ನೀಡುವವರು ಕಡಿಮೆ ದರದಲ್ಲಿ ತಮ್ಮಿಷ್ಟದ ವಿನ್ಯಾಸದಿಂದ ಕಡಿಮೆ ದರದಲ್ಲಿ ಗೋಡೆಗಳನ್ನು ಅಲಂಕರಿಸಬಹುದಾಗಿದೆ.

    ಪಂಕಜ ಕೆ.ಎಂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts