ರಟ್ಟಿಹಳ್ಳಿ: ತುಂಗಾ ಮೇಲ್ದಂಡೆ ಕಾಲುವೆ ನವೀಕರಣ, ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿ ಕರ್ನಾಟಕ ನೀರಾವರಿ ನಿಗಮದಿಂದ 39.43 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಆದೇಶವಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಟ್ಟಿಹಳ್ಳಿ ತಾಲೂಕಿನ ಕಮಲಾಪುರ ಗ್ರಾಮದಿಂದ ನೇಶ್ವಿ ಗ್ರಾಮದವರೆಗೆ ತುಂಗಾ ಮೇಲ್ದಂಡೆ ಕಾಲುವೆ ಹಾದು ಹೋಗಿರುತ್ತದೆ. ಈ ಕಾಲುವೆ ನಿರ್ವಣವಾಗಿ 23 ವರ್ಷ ಕಳೆದಿದೆ. ಸಮರ್ಪಕ ನಿರ್ವಹಣೆ ಮತ್ತು ಅನುದಾನದ ಕೊರತೆಯಿಂದಾಗಿ ಕಾಲುವೆಗಳು ದುರಸ್ತಿಯ ಹಂತದಲ್ಲಿವೆ. ಮುಂಬರುವ ದಿನಗಳಲ್ಲಿ ಅತಿವೃಷ್ಟಿಯಿಂದ ಕಾಲುವೆಗಳು ಒಡೆದು ಹೋದರೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗುವ ಸಾಧ್ಯತೆಗಳಿದ್ದು, ರೈತರ ಹಿತದೃಷ್ಟಿಯಿಂದ ಕಾಲುವೆಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಮೊಟ್ಟ ಮೊದಲ ಭಾರಿಗೆ ದೊಡ್ಡ ಮಟ್ಟದಲ್ಲಿ ಕಾಲುವೆಯ ಅಭಿವೃದ್ಧಿಗೆ 39.43 ಕೋಟಿ ರೂ. ಅನುದಾನಕ್ಕೆ ಮಂಜೂರಾತಿ ನೀಡಿದೆ. ಮುಂದಿನ ದಿನಗಳಲ್ಲಿ ಅವಶ್ಯವಿರುವ ಕಡೆ ಕಾಲುವೆಗಳ ದುರಸ್ತಿ ಮತ್ತು ಜಂಗಲ್ ಕಟಾವ್ ಹೀಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.