ಬೀದಿಗೆ ಬಿದ್ದ 38 ಕುಟುಂಬಗಳು

ಯಳಂದೂರು: ವಸತಿ ಫಲಾನುಭವಿಗಳನ್ನು ಆಯ್ಕೆ ಮಾಡಿ ವರ್ಷ ಕಳೆದರೂ ಹಣ ಬಾರದ ಹಿನ್ನೆಲೆಯಲ್ಲಿ ತಾಲೂಕಿನ ಕೆಸ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸ್ತೂರು, ಬಸವಾಪುರ, ಕಟ್ನವಾಡಿ, ಕೆ. ಹೊಸೂರು ಗ್ರಾಮದ 38 ಕುಟುಂಬಗಳು ರಸ್ತೆ ಬದಿಯಲ್ಲಿ ಶೀಟ್, ತೆಂಗಿನ ಗರಿ ಹಾಕಿಕೊಂಡು ವಾಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಬಾರದ ಹಣ: ಕೆಸ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮಗಳ ಹಿಂದುಳಿದ ವರ್ಗಗಳ ತೀರಾ ಬಡ ಕುಟುಂಬಗಳನ್ನು ಬಸವ ವಸತಿ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಆಯ್ಕೆ ಮಾಡಲಾಗಿತ್ತು. ಆಯ್ಕೆ ಮಾಡಿ ಒಂದು ವರ್ಷವಾದರೂ ಇನ್ನೂ ಒಂದು ಕಂತಿನ ಹಣವೂ ಇವರಿಗೆ ಬಿಡುಗಡೆಯಾಗಿಲ್ಲ.

ವಸತಿ ಯೋಜನೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಈ 38 ಕುಟುಂಬ ಶಿಥಿಲವಾಗಿದ್ದ ತಮ್ಮ ಹಳೆಯ ಮನೆಗಳನ್ನು ಕೆಡವಿ ಅಡಿಪಾಯವನ್ನು ಹಾಕಿಕೊಂಡಿದ್ದರು. ಇದಾದ ನಂತರವೇ ಜಿಪಿಎಸ್ ಮಾಡಿ ಮೊದಲ ಕಂತಿನ ಹಣ ಪಾವತಿಯಾಗುವ ನಿಯಮವಿದೆ. ಆದರೆ ಅಡಿಪಾಯವನ್ನು ಸಾಲ ಮಾಡಿ ಹಾಕಿಕೊಂಡಿದ್ದರೂ ಸರ್ಕಾರದಿಂದ ಒಂದು ನಯಪೈಸೆ ಬಿಡುಗಡೆಯಾಗಿಲ್ಲ. ಹಾಗಾಗಿ ಮನೆ ಬದಿಯಲ್ಲಿ, ಬೇರೆಯವರ ಜಾಗದಲ್ಲಿ, ಶೀಟ್‌ಗಳನ್ನು, ತೆಂಗಿನ ಗರಿಗಳನ್ನು ಹಾಕಿಕೊಂಡು ಬದುಕು ಸವೆಸುವ ಸ್ಥಿತಿ ನಿರ್ಮಾಣವಾಗಿದೆ.

ಬಿಸಿಲು ಮಳೆಯ ಅಳುಕಿನಲ್ಲೇ ಬದುಕು: ಈಚೆಗೆ ಬಿಸಿಲಿನ ತಾಪ ಹೆಚ್ಚಾಗಿದ್ದು, ಶೀಟ್‌ನಲ್ಲಿ ಶೆಡ್ ನಿರ್ಮಿಸಿ ಇರುವ ಸ್ವಲ್ಪ ಜಾಗದಲ್ಲೇ ವಾಸವಾಗಿದ್ದೇವೆ. ಆದರೆ ಈಚೆಗೆ ಜೋರು ಗಾಳಿ ಬೀಸಿ ಶೀಟ್‌ಗಳು ಹಾರಿ ಹೋಗಿ ಮಳೆಯಲ್ಲೇ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಯಿತು. ಅಕ್ಕಪಕ್ಕದ ಮನೆಗಳ ಜಗುಲಿಗಳ ಮೇಲೆ ಸಂಸಾರ ಮಾಡುವ ಪರಿಸ್ಥಿತಿ ಇದೆ ಎನ್ನುತ್ತಾರೆ ಕೆಸ್ತೂರು ಗ್ರಾಮದ ಮಂಗಳಮ್ಮ, ನಾರಾಯಣಸ್ವಾಮಿ ದಂಪತಿ.

ನಮ್ಮ ಮನೆಯನ್ನು ಕೆಡವಿ ಸಾಲ ಮಾಡಿ ಅಡಿಪಾಯ ಹಾಕಿದ್ದೆವು. ಆದರೆ ಪಂಚಾಯಿತಿಯಿಂದ ಇನ್ನೂ ಒಂದೂ ಬಿಲ್ ಪಾವತಿಯಾಗಿಲ್ಲ. ಇದರ ಮುಂಭಾಗದಲ್ಲೇ ಚರಂಡಿ ಹಾದು ಹೋಗಿದೆ. ಅಡಿಪಾಯದ ಮೇಲ್ಭಾಗದಲ್ಲೇ ತೆಂಗಿನ ಗರಿಯ ಶೆಡ್ ಹಾಕಿ ವಾಸವಾಗಿದ್ದೇವೆ. ರಾತ್ರಿ ವೇಳೆ ಹಾವು, ಚೇಳು ಸೇರಿ ವಿಷಜಂತುಗಳು ಮನೆಯೊಳಗೆ ನುಗ್ಗುತ್ತದೆ. ಜೀವಭಯವನ್ನು ಬಿಟ್ಟು ನಾವು ಬದುಕು ಸಾಗಿಸುವ ಅನಿವಾರ್ಯತೆ ಇದೆ. ಎನ್ನುತ್ತಾರೆ ಬಸವಾಪುರ ಗ್ರಾಮದ ಬಟ್ಟಮ್ಮ, ಭಾಗ್ಯ.

ಶೀಘ್ರದಲ್ಲೇ ಹಣ ಬಿಡುಗಡೆಯಾಗಲಿ: ಬಸವ ವಸತಿ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳು ತೀರಾ ಬಡ ಹಿಂದುಳಿದ ಜನಾಂಗದವರಾಗಿದ್ದಾರೆ. ಇರುವ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣಕ್ಕೆ ಇವರು ಸಾಲ ಮಾಡಿ ಅಡಿಪಾಯ ಹಾಕಿಕೊಂಡಿದ್ದಾರೆ. ಆದರೆ ಕೆಲವು ತಾಂತ್ರಿಕ ಕಾರಣಗಳ ನೆಪವೊಡ್ಡಿ ಅನುದಾನ ಬಿಡುಗಡೆಯಾಗಿಲ್ಲ ಎಂದು ಪಂಚಾಯಿತಿಯವರು ಸಬೂಬು ಹೇಳುತ್ತಿದ್ದಾರೆ. ಇವರ ಕಷ್ಟಕ್ಕೆ ಕೂಡಲೇ ಸಂಬಂಧಪಟ್ಟವರು ಕ್ರಮ ವಹಿಸಿ ನಿರ್ಗತಿಕರಿಗೆ ಸೂರು ಒದಗಿಸಬೇಕು ಎಂದು ಗ್ರಾಮದ ಸ್ವಾಮಿ, ಮಣಿಕಂಠ ಸೇರಿದಂತೆ ಹಲವರ ಆಗ್ರಹವಾಗಿದೆ.

ಶೀಘ್ರದಲ್ಲೇ ಪರಿಹಾರ: ಕೆಸ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2018 ರಲ್ಲೇ 38 ಫಲಾನುಭವಿಗಳನ್ನು ಬಸವ ವಸತಿ ಯೋಜನೆ ಮೂಲಕ ಆಯ್ಕೆ ಮಾಡಲಾಗಿತ್ತು. ಆದರೆ ಕೆಲವು ತಾಂತ್ರಿಕ ದೋಷಗಳಿಂದ ಇವರಿಗೆ ಇನ್ನೂ ಒಂದೂ ಬಿಲ್ ಆಗಿಲ್ಲ. ಕೊಡಗಿನಲ್ಲಿ ಪ್ರವಾಹ ಬಂದ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆಯಾಗಿರಲಿಲ್ಲ. ನಂತರ ಜಿಪಂ ಸಿಇಒ ವರ್ಗಾವಣೆ ಹಾಗೂ ಈಗ ಚುನಾವಣೆ ನೀತಿ ಸಂಹಿತೆ ಬಂದ ಹಿನ್ನೆಲೆಯಲ್ಲಿ ಬಿಲ್ ತಡವಾಗಿದೆ. ಎಲ್ಲ ದಾಖಲೆಗಳನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು ಆದಷ್ಟು ಬೇಗ ಹಣ ಬಿಡುಗಡೆಗೆ ಕ್ರಮ ವಹಿಸಲಾಗುವುದು. ಲಲಿತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಯಳಂದೂರು.

Leave a Reply

Your email address will not be published. Required fields are marked *