ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದಾಗಲಿ

ಚಿಕ್ಕಮಗಳೂರು: ಭಾರತೀಯ ಸೈನಿಕರ ಮೇಲಿನ ದಾಳಿ ಖಂಡಿಸಿ ತಹಸೀಲ್ದಾರ್ ಕಚೇರಿ ಎದುರು ಭಾನುವಾರ ಪ್ರತಿಭಟನೆ ನಡೆಸಿದ ಜಿಲ್ಲಾ ಬಿಜೆಪಿ ಕಾರ್ಯಕರ್ತರು, ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನದ 370 ಕಾಯ್ದೆ ವಾಪಸ್ ಪಡೆದು, ತಾಲಿಬಾನಿಗಳಿಗೆ ಸರಿಯಾದ ಬುದ್ಧಿ ಕಲಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ದೇಶದ ಭದ್ರತೆಗೆ ಧಕ್ಕೆ ತರುವ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಸರ್ಕಾರ ಸೇನೆ ಮೂಲಕವೇ ಉತ್ತರ ನೀಡಬೇಕು. ಧರ್ಮದ ಹೆಸರಲ್ಲಿ ಸ್ವರ್ಗ ಕಾಣಬೇಕೆಂದು ಹಂಬಲಿಸುವ ನರ ರಾಕ್ಷಸರಿಗೆ ನರಕ ದರ್ಶನ ಮಾಡಿಸಬೇಕು ಎಂದರು.

ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಿರುವುದರಿಂದ ದೇಶಕ್ಕೆ ಯಾವ ಪ್ರಯೋಜನವೂ ಆಗಿಲ್ಲ. ಬದಲಾಗಿ ಮತ್ತಷ್ಟು ವಿಧ್ವಂಸಕ ಕೃತ್ಯಗಳು ಹೆಚ್ಚುತ್ತಿವೆ. ಭಯೋತ್ಪಾದಕರಿಗೆ ಅಲ್ಲಿ ಆಶ್ರಯ ನೀಡಲಾಗುತ್ತಿದೆ. ಸೈನಿಕರ ಮೇಲೆ ಪ್ರತಿದಿನ ಕಲ್ಲು ತೂರಾಟ ನಡೆಯುತ್ತಿದೆ. ಕೂಡಲೆ ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ನೀಡಿರುವ ವಿಶೇಷ ಕಾಯ್ದೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್.ಜೀವರಾಜ್ ಮಾತನಾಡಿ, ದೇಶದೊಳಗಿನ ಭಯೋತ್ಪಾದಕರನ್ನು ಮೊದಲು ಮಟ್ಟ ಹಾಕಬೇಕು. ದೇಶ ದುಃಖದಲ್ಲಿರುವಾಗ ಬೆಳಗಾವಿಯಲ್ಲಿ ಜುನೇಶಾ ಪಾಕಿಸ್ತಾನ ಬೆಂಬಲಕ್ಕೆ ವ್ಯಕ್ತಪಡಿಸಿ ಸ್ಟೇಟಸ್ ಹಾಕಿದ್ದಾನೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದೇಶ ಭಿನ್ನಾಭಿಪ್ರಾಯ ಬದಿಗಿಟ್ಟು ಸೈನಿಕರ ಬೆಂಬಲಕ್ಕೆ ನಿಲ್ಲಬೇಕು ಎಂದರು.