ತಲೆಗೂದಲಿಗೆ ಬಿಳಿ ಬಣ್ಣ ಬಳಿದುಕೊಂಡು ಶಬರಿಮಲೆ ಪ್ರವೇಶಿಸಿ ದರ್ಶನ ಪಡೆದ ಮಹಿಳೆ

ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಅಯ್ಯಪ್ಪ ಭಕ್ತರು ನಡೆಸುತ್ತಿರುವ ಪ್ರತಿಭಟನೆ ನಡುವೆಯೇ 36 ವರ್ಷದ ಮಂಜು ಎಂಬ ದಲಿತ ಕಾರ್ಯಕರ್ತೆಯೊಬ್ಬರು ಮಂಗಳವಾರ ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.

ಇದಕ್ಕೆ ಪುಷ್ಠಿ ನೀಡುವಂತೆ ‘ನವೋದಯ ಕೇರಳ ಶಬರಿಮಲೆ ಕಡೆಗೆ’ ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ಶಬರಿಮಲೆ ದೇಗುಲಕ್ಕೆ ಭೇಟಿ ನೀಡಿದ್ದ ಹಲವು ಫೋಟೊ ಮತ್ತು ವಿಡಿಯೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

ವಿಡಿಯೋವೊಂದರಲ್ಲಿ ಮಂಜು ಅವರು ಜ. 8ರಂದು ಪೊಲೀಸರ ನೆರವು ಮತ್ತು ಅಯ್ಯಪ್ಪ ಭಕ್ತರ ಯಾವುದೇ ಪ್ರತಿಭಟನೆಯ ವಿರೋಧವಿಲ್ಲದೆಯೇ 18 ಮೆಟ್ಟಿಲುಗಳ ಮೂಲಕ ದೇಗುಲವನ್ನು ಪ್ರವೇಶಿಸಿದ್ದು, ಸುಮಾರು ಎರಡು ಗಂಟೆಗಳ ಕಾಲ ಅಲ್ಲಿಯೇ ಇದ್ದು ಪ್ರಾರ್ಥನೆ ಸಲ್ಲಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಅಕ್ಟೋಬರ್‌ನಲ್ಲಿ ಅಯ್ಯಪ್ಪ ದೇಗುಲ ಪ್ರವೇಶಿಸಲು ಯತ್ನಿಸಿ ಆ ಪ್ರದೇಶದಲ್ಲಿ ಜಾಸ್ತಿ ಮಳೆಯಿದ್ದದ್ದರಿಂದ ಪೊಲೀಸರು ಆಕೆಯನ್ನು ವಾಪಸ್‌ ಕಳುಹಿಸಿದ್ದರು.

ಫೇಸ್‌ಬುಕ್‌ನಲ್ಲಿ ಹಾಕಿರುವ ಚಿತ್ರವೊಂದರಲ್ಲಿ ಮಂಜು ಅವರು ವಯಸ್ಸಾದವರಂತೆ ಕಾಣಲು ಮತ್ತು ಪ್ರತಿಭಟನಾಕಾರ ದಾಳಿಯಿಂದ ತಪ್ಪಿಸಿಕೊಳ್ಳಲು ತಲೆಗೆ ಬಿಳಿ ಬಣ್ಣ ಬಳಿದುಕೊಂಡಿದ್ದಾರೆ.

ಇನ್ನು ಸೆ. 28, 2018ರಂದು ಎಲ್ಲ ವಯೋಮಾನದ ಮಹಿಳೆಯರಿಗೂ ಶಬರಿಮಲೆ ದೇಗುಲಕ್ಕೆ ಪ್ರವೇಶ ಕಲ್ಪಿಸಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಅಂದಿನಿಂದಲೂ ಅಯ್ಯಪ್ಪ ಭಕ್ತರು ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಪ್ರತಿಭಟನೆ ಕೈಗೊಂಡಿದ್ದರು. ದೇಗುಲ ಪ್ರವೇಶಕ್ಕೆ ಯತ್ನಿಸಿದ ಮಹಿಳೆಯರನ್ನು ವಾಪಸ್‌ ಕಳುಹಿಸಿದ್ದರು.

ಇನ್ನು ಬಿಜೆಪಿ ಕೂಡ ಮಹಿಳೆಯರ ಪ್ರವೇಶವನ್ನು ಖಂಡಿಸಿ ವಿವಿಧೆಡೆ ಪ್ರತಿಭಟನೆಯನ್ನು ಕೈಗೊಂಡಿತ್ತು. (ಏಜೆನ್ಸೀಸ್)