35 ಗ್ರಾಮಗಳ 1891 ರೈತರ ಆಯ್ಕೆ

ಸುಭಾಸ ಧೂಪದಹೊಂಡ ಕಾರವಾರ
ರಾಸಾಯನಿಕ, ಯಾಂತ್ರಿಕ, ಸಾವಯವ ಕೃಷಿಗಳಿಗಷ್ಟೇ ಪ್ರೋತ್ಸಾಹ ನೀಡುತ್ತಿದ್ದ ಸರ್ಕಾರ ಇದೇ ಮೊದಲ ಬಾರಿಗೆ ಶೂನ್ಯ ಬಂಡವಾಳ ಕೃಷಿಗೂ ಪ್ರೋತ್ಸಾಹ ಪ್ರಾರಂಭಿಸಿದೆ.

2018-19 ನೇ ಸಾಲಿನಲ್ಲೇ ಘೊಷಣೆಯಾದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಗೆ ಜಿಲ್ಲೆಯಲ್ಲಿ ಈ ವರ್ಷ ಚಾಲನೆ ದೊರೆಯಲಿದೆ. ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸೇರಿದ ಸಮಿತಿಯೊಂದು ರಚನೆಗೊಂಡಿದ್ದು, ಅದು ಜಿಲ್ಲೆಯ 35ಕ್ಕೂ ಹೆಚ್ಚು ಗ್ರಾಮಗಳ 1891 ರೈತರನ್ನು ಆಯ್ಕೆ ಮಾಡಿದೆ.

ಯೋಜನೆಯಡಿ ಮೊದಲ ಹಂತದಲ್ಲಿ ಬ್ರಹ್ಮಾವರದ ತಜ್ಞರಿಂದ ರೈತರಿಗೆ ತರಬೇತಿ ನೀಡಲಾಗುವುದು. ನಂತರ ಮೂರು ವರ್ಷದವರೆಗೆ ಕೃಷಿಕರಿಗೆ ತಾಂತ್ರಿಕ ಸಲಹೆ, ಪ್ರೋತ್ಸಾಹಧನ ದೊರೆಯಲಿದೆ. ಹಸು ಕೊಳ್ಳಲು ಅಥವಾ ಜೀವಾಮೃತ ಘಟಕಗಳ ನಿರ್ವಣಕ್ಕೆ ಒಬ್ಬ ರೈತನಿಗೆ ಗರಿಷ್ಠ 30 ಸಾವಿರ ರೂ.ವರೆಗೆ ಸಬ್ಸಿಡಿ ದೊರೆಯಲಿದೆ. ಅದರ ಮೇಲ್ವಿಚಾರಣೆ ನೋಡಿಕೊಳ್ಳಲು ಕ್ಲಸ್ಟರ್ ಸಿಬ್ಬಂದಿ ನೇಮಕ ಮಾಡಲಾಗುವುದು. ಮುಂದಿನ ಹಂತದಲ್ಲಿ ಇನ್ನಷ್ಟು ಗ್ರಾಮಗಳ ಆಯ್ಕೆ ನಡೆಯಲಿದೆ.

ಯಾವ್ಯಾವ ಗ್ರಾಮಗಳು?

ಕಾರವಾರದ ನಗೆ ಕೋವೆಯ 31.95 ಹೆಕ್ಟೇರ್ (65 ರೈತರು), ಬೇಳೂರ ಹಾಗೂ ಸಿದ್ದರದ 39.5 ಹೆಕ್ಟೇರ್ (95 ರೈತರು), ಅಂಕೋಲಾದ ಅಚವೆಯ 20 ಹೆ. (88 ರೈತರು), ಕಲ್ಲೇಶ್ವರದ 14 ಹೆ. (58 ರೈತರು), ಕುಮಟಾದ ನಾಗೂರಿನ 50 ಹೆ. (148 ರೈತರು), ಮೂರೂರು, ಕಲ್ಲಬ್ಬೆ ಮತ್ತು ಕಂದವಳ್ಳಿಯ 60 ಹೆ. (244 ರೈತರು), ಹೊನ್ನಾವರದ ಚಂದಾವರಸ 40 ಹೆ. (61 ರೈತರು), ಮುಟ್ಟಾ, ಗುಂಡಬಾಳ 40 ಹೆ. (61 ರೈತರು), ಮಾಳ್ಕೋಡದ 40 ಹೆ. (101 ರೈತರು), ಭಟ್ಕಳದ ಕುಂಟವಾಣಿಯ 50 ಹೆ. (121 ರೈತರು), ಕೊಪ್ಪದ 50 ಹೆ. (85 ರೈತರು), ಶಿರಸಿಯ ಮೇಲಿನ ಓಣಿಕೇರಿ 47 ಹೆ. (110 ರೈತರು), ಮಂಜಗುಣಿಯ 47 ಹೆ. (123 ರೈತರು), ಸಿದ್ದಾಪುರದ ತಾರಗೋಡ 52 ಹೆ. (82 ರೈತರು), ಮುಟ್ಟಳ್ಳಿ 50 ಹೆ. (66 ರೈತರು), ಯಲ್ಲಾಪುರದ ಕಿರವತ್ತಿ, ಹಾಸಣಗಿ, ಕುಂದರಗಿ, ಗಿತ್ಲಳ್ಳಿ 50 ಹೆ. (82 ರೈತರು), ಆನಗೋಡ, ಬೀಸಗೋಡ ದೇಹಳ್ಳಿ, ವಜ್ರಳ್ಳಿಯ 40 ಹೆ. (75 ರೈತರು), ಮುಂಡಗೋಡಿನ ಇಂದೂರು, ಸಾಲಗಾಂವ, ನಂದಿಕಟ್ಟಾದ 25 ಹೆಕ್ಟೇರ್ (40 ರೈತರು), ಪಾಳಾ, ಮಳಗಿ, ಕೊಳಗಿ, ಕೋಡಂಬಿ ಗ್ರಾಮಗಳ 20 ಹೆ. (45 ರೈತರು), ಹಳಿಯಾಳ ಬಾಸಣಗೇರಿ ಗ್ರಾಮದ 13 ಹೆ. (47 ರೈತರು), ಜೊಯಿಡಾ ವೈಜಗಾಂವನ 25 ಹೆ. (43 ರೈತರು), ಕುಂಬಾರವಾಡದ 22 ಹೆ. (34 ರೈತರು), ಆನಗೋಡದ 17 ಹೆ. (23 ರೈತರು) ಈ ಸೌಲಭ್ಯ ಪಡೆಯಲು ಆಯ್ಕೆ ಮಾಡಲಾಗಿದೆ.

ಏನಿದು ಶೂನ್ಯ ಬಂಡವಾಳ ಕೃಷಿ ?
ಗೊಬ್ಬರ, ಕೀಟ ನಾಶಕ ಅಥವಾ ಯಾವುದೇ ರಾಸಾಯನಿಕ ಬಳಸದೆ, ಬೆಳೆಯಿಂದಲೇ ಸಿಗುವ ರೌದಿ, ಸೋಗೆ ಮುಂತಾದ ಕಚ್ಚಾ ವಸ್ತುಗಳನ್ನು ಭೂಮಿಗೆ ಸೇರಿಸಿ, ಮುಚ್ಚಿಗೆ ಮಾಡಿ, ಹಸುವಿನ ಗಂಜಲದಿಂದ ಜೀವಾಮೃತ ತಯಾರಿಸಿ ಬೆಳೆಗಳಿಗೆ ಸಿಂಪಡಿಸುವ ಮೂಲಕ ಕಡಿಮೆ ನೀರು ಬಳಸಿ ಕೃಷಿ ಮಾಡುವ ಪದ್ಧತಿಯನ್ನು ಶೂನ್ಯ ಬಂಡವಾಳ ಕೃಷಿ ಎನ್ನಲಾಗುತ್ತದೆ. ಪಾಲೇಕರ್ ಕೃಷಿ ಎಂದೂ ಇದು ಪ್ರಸಿದ್ಧವಾಗಿದೆ. ರಾಜ್ಯದ ಹಲವು ರೈತರು ಈಗಾಗಲೇ ಈ ಪದ್ಧತಿ ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ. ರಾಸಾಯನಿಕ ಗೊಬ್ಬರ, ಕೀಟ ನಾಶಕಕ್ಕಾಗಿ ಲಕ್ಷಾಂತರ ರೂ. ಸಾಲ ಮಾಡಿ ಖರ್ಚು ಮಾಡಿ, ಕೊನೆಗೆ ಬೆಳೆ ಬಾರದೇ, ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದಿನದಲ್ಲಿ ಶೂನ್ಯ ಬಂಡವಾಳ ಕೃಷಿ ರೈತರ ಕೈ ಹಿಡಿಯಲಿದೆ ಎಂಬ ಯೋಜನೆ ಸರ್ಕಾರದ್ದು.

Leave a Reply

Your email address will not be published. Required fields are marked *