ಕುಡಿಯಲು ನೀರು ತರುವುದಾಗಿ ಹೇಳಿ ಹೋದಳು; ಚೂರಿ ತಂದು ಪತಿಯನ್ನು 11 ಬಾರಿ ಇರಿದು ಕೊಂದಳು…

ಮುಂಬೈ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯೊಬ್ಬಳು ಮಲಗಿದ್ದ ಪತಿಗೆ 11 ಬಾರಿ ಚೂರಿಯಲ್ಲಿ ಇರಿದು, ಕತ್ತು ಕೊಯ್ದು ಹತ್ಯೆ ಮಾಡಿದ್ದಾಳೆ. ಬಳಿಕ ಕೋಣೆಯಿಂದ ಹೊರಹೋಗಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆತನ ಪಾಲಕರ ಬಳಿ ಹೇಳಿ ತಣ್ಣಗೆ ಕುಳಿತಿದ್ದಾಳೆ. ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ತನ್ನ ತಪ್ಪೊಪ್ಪಿಕೊಂಡಿದ್ದಾಳೆ…

ಇದು ಮುಂಬೈನ ನಲ್ಲಾಸೊಪಾರಾ ಎಂಬಲ್ಲಿ ನಡೆದಿರುವ ಘಟನೆ. ಪ್ರಣಾಲಿ (33) ಕೊಲೆಗಾರ್ತಿ. ಸುನಿಲ್​ ಕದಂ (36) ಕೊಲೆಯಾದವನು. ಮುಂಜಾನೆ 5 ಗಂಟೆಯಲ್ಲಿ ದಂಪತಿ ನಡುವೆ ಜಗಳವಾಗಿತ್ತು. ಆನಂತರದಲ್ಲಿ ತನ್ನ ಪತಿಯನ್ನು ಪ್ರಣಾಲಿ ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಟಲಿಂಜ್​ ಠಾಣೆಯ ಪೊಲೀಸರ ಪ್ರಕಾರ ಸುನಿಲ್​ ಮತ್ತು ಪ್ರಣಾಲಿ ಬುಧವಾರ ಬೆಳಗ್ಗೆ 5 ಗಂಟೆಯಲ್ಲಿ ಜಗಳವಾಡಿಕೊಂಡಿದ್ದರು. ಆನಂತರದ ಸುನಿಲ್​ ನಿದ್ದೆಗೆ ಜಾರಿದ್ದ. ಈ ಸಂದರ್ಭದಲ್ಲಿ ಕುಡಿಯಲು ನೀರು ತರುವುದಾಗಿ ಹೇಳಿ ಅಡುಗೆಮನೆಗೆ ಹೋದ ಪ್ರಣಾಲಿ ತರಕಾರಿ ಹೆಚ್ಚುವ ಚಾಕುವಿನೊಂದಿಗೆ ಮರಳಿದ್ದಳು. ಬಳಿಕ ಗಾಢ ನಿದ್ದೆಯಲ್ಲಿದ್ದ ಪತಿಯನ್ನು 11 ಬಾರಿ ಇರಿದಿದ್ದಲ್ಲದೆ, ಆತನ ಕತ್ತನ್ನು ಸೀಳಿದ್ದಾಗಿ ಹೇಳಿದ್ದಾರೆ.

ಬಳಿಕ ತಮ್ಮ ಮಲಗುವ ಕೋಣೆಯಿಂದ ಹೊರಬಂದ ಆಕೆ ಹಾಲ್​ನಲ್ಲಿ ಮಲಗಿದ್ದ ಸುನಿಲ್​ನ ಪಾಲಕರು ಹಾಗೂ ತಮ್ಮಿಬ್ಬರು ಮಕ್ಕಳಿಗೆ ಸುನಿಲ್​ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದಾಳೆ. ಈ ಬಗ್ಗೆ ಸುನಿಲ್​ನ ತಂದ ಆನಂದ ಟಲಿಂಜ್​ ಪೊಲೀಸ್​ ಠಾಣೆಗೆ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ ಅದು ಆತ್ಮಹತ್ಯೆಯಲ್ಲ, ಬದಲಿಗೆ ಹತ್ಯೆ ಎಂಬ ಅನುಮಾನ ಮೂಡಿದೆ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯೇ ಆಗಲಿ ತನಗೆ ತಾನು 11 ಬಾರಿ ಇರಿದುಕೊಳ್ಳಲು ಸಾಧ್ಯವಿಲ್ಲ ಎಂಬುದು ಪೊಲೀಸರ ಅನುಮಾಕ್ಕೆ ಕಾರಣವಾಗಿದೆ. ಬಳಿಕ ಪ್ರಣಾಲಿಯನ್ನು ವಿಚಾರಿಸಿದಾಗ ತಾನೇ ಕೊಲೆಗಾರ್ತಿ ಎಂದು ಒಪ್ಪಿಕೊಂಡು ಎನ್ನಲಾಗಿದೆ. ಇದೀಗ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *