ಕರಾಳ ಕೇರಳ: ಸತ್ತವರು 33, ಕಾಣೆಯಾದವರು 6 ಜನ

ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜ್ಯಾದ್ಯಂತ ಸಂಕಷ್ಟ ಎದುರಾಗಿದ್ದು, ನೆರೆಯಿಂದಾಗಿ ಇದುವರೆಗೂ 33 ಮಂದಿ ಮೃತಪಟ್ಟಿದ್ದು, ಆರು ಜನರು ಕಾಣೆಯಾಗಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸ್ಪಷ್ಟಪಡಿಸಿದ್ದಾರೆ.

ಪ್ರವಾಹ ಪರಿಸ್ಥಿತಿ ಕುರಿತಾಗಿ ಮಾತನಾಡಿರುವ ಅವರು, ಇದುವರೆಗೂ ಎಂದಿಗೂ ಈ ರೀತಿಯ ಪ್ರವಾಹಕ್ಕೆ ಕೇರಳ ಸಾಕ್ಷಿಯಾಗಿರಲಿಲ್ಲ. ಪರಿಸ್ಥಿತಿಯನ್ನು ಎದುರಿಸಲು ಇಡೀ ರಾಜ್ಯ ಒಟ್ಟಾಗಿದ್ದು, ಅಗತ್ಯವಿರುವ ಎಲ್ಲ ರೀತಿಯ ನೆರವನ್ನು ನೀಡಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯವಿರುವ ನೆರವನ್ನು ವಿಸ್ತರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡ ಸಿದ್ಧರಿದ್ದಾರೆ. ರಾಜ್ಯ ಪೊಲೀಸರು, ಎನ್‌ಡಿಆರ್‌ಎಫ್‌, ಭಾರತೀಯ ಸೇನೆ ಮತ್ತು ಇತರೆ ಸೇನಾಪಡೆಗಳು ಕೂಡ ನೆರೆಯನ್ನು ನಿಭಾಯಿಸಲು ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

ಭಯಂಕರ ಮಳೆಯಿಂದಾಗಿ ಕೇರಳದಲ್ಲಿ ಇದುವರೆಗೂ ಮಹಿಳೆಯರು ಮತ್ತು ಮಕ್ಕಳು ಸೇರಿ 1000ಕ್ಕೂ ಅಧಿಕ ಮಂದಿಯನ್ನು ಭಾರತೀಯ ಸೇನಾಪಡೆ ರಕ್ಷಿಸಿದೆ. ಸುಮಾರು 40ಕ್ಕೂ ಅಧಿಕ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಕಳೆದ ಕೆಲದಿನಗಳಿಂದಲೂ ಮಳೆಯ ಅಬ್ಬರ ಮುಂದುವರಿದಿದ್ದು, ರಾಜ್ಯದ ವಯನಾಡ್‌, ಇಡುಕ್ಕಿ, ಅಲಪ್ಪುಝಾ, ಕೊಟ್ಟಾಯಂ, ಎರ್ನಾಕುಲಂ, ಪಲಕ್ಕಾಡ್‌, ಮಲ್ಲಾಪುರಂ ಮತ್ತು ಕೋಯಿಕೋಡ್‌ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ರೆಡ್‌ ಅಲರ್ಟ್‌ ಘೋಷಿಸಲಾಗಿದೆ. (ಏಜೆನ್ಸೀಸ್​)