33 ಲಕ್ಷ ರೂ. ಉಳಿತಾಯ ಬಜೆಟ್

ಮುಂಡರಗಿ: ಪಟ್ಟಣದ ಪುರಸಭೆಯಲ್ಲಿ ಶನಿವಾರ 2019-20ನೇ ಸಾಲಿಗೆ 33.25 ಲಕ್ಷ ರೂ. ನಿರೀಕ್ಷಿತ ಉಳಿತಾಯ ಆಯ-ವ್ಯಯವನ್ನು ಅಧ್ಯಕ್ಷ ಬಸವರಾಜ ನರೇಗಲ್ಲ ಪರವಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭು ಅಬ್ಬಿಗೇರಿ ಮಂಡಿಸಿದರು.

ಪ್ರಸಕ್ತ ಸಾಲಿನಲ್ಲಿ 19,03,94,164 ರೂ. ಆದಾಯ ನಿರೀಕ್ಷೆ ಮಾಡಲಾಗಿದೆ. ಇದರಲ್ಲಿ 18,70,68,374 ರೂ. ವೆಚ್ಚವಾಗಲಿದ್ದು, 33,25,790 ರೂ. ಉಳಿತಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆಸ್ತಿ ತೆರಿಗೆಯಿಂದ 75 ಲಕ್ಷ ರೂ, ನೀರಿನ ಕರ 53.54 ಲಕ್ಷ ರೂ., ಟ್ರೇಡ್ ಲೈಸನ್ಸ್ 2 ಲಕ್ಷ ರೂ, ವಾಣಿಜ್ಯ ಮಳಿಗೆ ಬಾಡಿಗೆ 1.85 ಲಕ್ಷ ರೂ, ಕಟ್ಟಡ ಪರವಾನಗಿ 15.76 ಲಕ್ಷ ರೂ., ಅಭಿವೃದ್ಧಿ ಶುಲ್ಕ 29 ಲಕ್ಷ ರೂ, ಖಾತೆ ಉತಾರ ಶುಲ್ಕ 10 ಲಕ್ಷ ರೂ, ಖಾತೆ ವರ್ಗಾವಣೆ 15 ಲಕ್ಷ ರೂ., ದಂಡ ಜುಲ್ಮಾನೆ ಹಾಗೂ ಇತರ ಮೂಲಗಳಿಂದ 86 ಲಕ್ಷ ರೂ. ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದರು.

ಸರ್ಕಾರದ ಎಸ್.ಎಫ್.ಸಿ. ಮುಕ್ತ ನಿಧಿಯಿಂದ 1 ಕೋಟಿ ರೂ, ಎಸ್.ಎಫ್.ಸಿ. ವೇತನ ಅನುದಾನ 1.24 ಕೋಟಿ ರೂ, ಎಸ್.ಎಫ್.ಸಿ. ವಿದ್ಯುತ್ ಅನುದಾನ 1.02 ಕೋಟಿ ರೂ., 4ನೇ ಹಣಕಾಸು ಯೋಜನೆಯಿಂದ 1.74 ಕೋಟಿ ರೂ. ನಿರೀಕ್ಷಿಸಲಾಗಿದೆ ಎಂದು ಹೇಳಿದರು.

ಬರಲಿರುವ ಒಟ್ಟು ಆದಾಯ ಹಾಗೂ ಸರ್ಕಾರದ ಅನುದಾನದಲ್ಲಿ ಮುಕ್ತನಿಧಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ನಿಧಿಗಾಗಿ ಒಟ್ಟು 36.35 ಲಕ್ಷ ರೂಪಾಯಿ ಬಳಸಲಾಗುವುದು. ಪುರಸಭೆ ಅನುದಾನದಿಂದ 2.74 ಲಕ್ಷ ರೂಪಾಯಿ ಖರ್ಚು ಮಾಡಲಾಗುವುದು ಎಂದು ತಿಳಿಸಿದರು.

ಕಾಯಂ ನೌಕರರ ವೇತನಕ್ಕಾಗಿ 1.23 ಕೋಟಿ ರೂ., ದಿನಗೂಲಿ ನೌಕರರಿಗಾಗಿ 72 ಲಕ್ಷ ರೂ., ಹೊರಗುತ್ತಿಗೆ ನೌಕಕರು ಹಾಗೂ ಕಂಪ್ಯೂಟರ್ ಆಪರೇಟರ್ ಅವರಿಗೆ 20 ಲಕ್ಷ ರೂ., ಕೆ.ಎಂ.ಆರ್.ಪಿ. ಸಿಬ್ಬಂದಿಗಾಗಿ 6.96 ಲಕ್ಷ ರೂಪಾಯಿ ಮೀಸಲಿರಿಸಲಾಗುತ್ತದೆ. ಪಟ್ಟಣದ ಜನತೆಗೆ ಮೂಲ ಸೌಲಭ್ಯ ಹಾಗೂ ಸೇವೆಗಳನ್ನು ನೀಡಲು ಲಕ್ಷಾಂತರ ರೂಪಾಯಿ ವೆಚ್ಚದ ಅಂದಾಜು ಪತ್ರಿಕೆಗಳನ್ನು ತಯಾರಿಸಲಾಗುವುದು. ಬಡ ಜನತೆಗೆ ಮನೆ ನಿರ್ವಿುಸಿ ಕೊಡಲು 75 ಎಕರೆ ಜಮೀನು ಖರೀದಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ಮುಖ್ಯಾಧಿಕಾರಿ ಸಿದ್ಧಲಿಂಗಪ್ರಭು ಇಬ್ರಂಡ್ಡಿ, ಸದಸ್ಯರು, ಇತರರಿದ್ದರು.