33 ಗ್ರಾಮಗಳಲ್ಲಿ ಸ್ಮಶಾನವೇ ಇಲ್ಲ

ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ

ಅಕ್ರಮ ಒತ್ತುವರಿ ಮತ್ತು ಭೂ ವಿವಾದದ ನಡುವೆ ಹಲವು ಗ್ರಾಮಗಳಲ್ಲಿ ರುದ್ರಭೂಮಿ ಇಲ್ಲದೆ ಜನರು ತೊಂದರೆ ಅನುಭವಿಸುವಂತಾಗಿದೆ.ಪ್ರಸ್ತುತ ಜಿಲ್ಲೆಯ 1573 ಗ್ರಾಮಗಳಲ್ಲಿ ರುದ್ರಭೂಮಿಗೆ ಜಾಗ ನೀಡಲಾಗಿದೆ. 33 ಗ್ರಾಮಗಳಲ್ಲಿ ರುದ್ರಭೂಮಿಗಳೇ ಇಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಮತ್ತೊಂದೆಡೆ ಹಲವು ಸ್ಮಶಾನಗಳು ಸ್ಥಳೀಯ ಪ್ರಭಾವಿಗಳ ಅಕ್ರಮ ಒತ್ತುವರಿಗೆ ನಲುಗಿವೆ. ಹಲವರು ಹಳೇ ಸಮಾಧಿಗಳನ್ನು ಒಡೆದು ಹಾಕಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದರ ನಡುವೆ ಸ್ವಚ್ಛತೆ ಸಮಸ್ಯೆ, ಮೂಲಸೌಕರ್ಯ ಕೊರತೆ ಮತ್ತು ಕಾಲಕಾಲಕ್ಕೆ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಂದ ಅನೇಕ ಸ್ಮಶಾನಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಇದರಿಂದ ನೋವಿನಲ್ಲಿ ಸಂಬಂಧಿಕರ ಅಂತ್ಯಸಂಸ್ಕಾರಕ್ಕೆ ತೆರಳುವ ಜನರು ಆಗರ ಸಮಸ್ಯೆಗಳಿಂದ ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ.

ನೆಮ್ಮದಿ ಹಾಳು: ಸ್ಮಶಾನ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಗಳಲ್ಲಿ ಆಗಾಗ ನಡೆಯುತ್ತಿರುವ ಗಲಾಟೆ ಪ್ರಕರಣಗಳು ಗ್ರಾಮಸ್ಥರ ನೆಮ್ಮದಿ ಹಾಳು ಮಾಡುತ್ತಿವೆ. ಅಧಿಕಾರಿಗಳು ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಿದ್ದರೂ ಬೇಲಿ ಹಾಕಿಲ್ಲ. ಇದರಿಂದ ಸಂಬಂಧಿಕರು ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ದಾಗ ಒತ್ತುವರಿದಾರರು ಅಂತ್ಯಸಂಸ್ಕಾರ ತಡೆಯುತ್ತಿದ್ದಾರೆ. ಇದರ ವಿಚಾರವಾಗಿ ಈಗಾಗಲೇ ವರ್ಲಕೊಂಡ, ಈರನಹಳ್ಳಿ, ಪೋಶೆಟ್ಟಹಳ್ಳಿಯಲ್ಲಿ ಮೃತರ ಸಂಬಂಧಿಕರು ಶವವನ್ನು ಗ್ರಾಮದಲ್ಲಿಟ್ಟು ವಿವಿಧ ಸಂಘಟನೆಗಳೊಂದಿಗೆ ಪ್ರತಿಭಟಿಸಿದ ಉದಾಹರಣೆಗಳೂ ಇವೆ. ಕೊನೆಗೆ ಅಧಿಕಾರಿಗಳು ಬಂದು ತಾತ್ಕಾಲಿಕ ಭರವಸೆ ಮೂಲಕ ಸಮಸ್ಯೆ ಬಗೆಹರಿಸಿದ್ದಾರೆ. ಆದರೆ, ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಅದರಲ್ಲೂ ಮೇಲ್ವರ್ಗ ಮತ್ತು ಶೋಷಿತ ವರ್ಗದ ನಡುವಿನ ಕದನಗಳು ವೈಷಮ್ಯ ಹೆಚ್ಚಳಕ್ಕೆ ಕಾರಣವಾಗಿದೆ.

ಅಭಿವೃದ್ಧಿಗೆ ನಿರ್ಲಕ್ಷ್ಯ:  ಸ್ಥಳೀಯ ಆಡಳಿತ ಸಂಸ್ಥೆಗಳ ವಿಶೇಷ ಅನುದಾನ, ನರೇಗಾ ಯೋಜನೆಯಲ್ಲಿ ಸ್ಮಶಾನಗಳನ್ನು ಅಭಿವೃದ್ಧಿ ಪಡಿಸಬಹುದು. ಆದರೆ, ಅನೇಕ ಸ್ಮಶಾನಗಳು ಅಧಿಕಾರಿಗಳ ನಿರ್ಲಕ್ಷ್ಯ ಎತ್ತಿ ತೋರಿಸುವ ರೀತಿಯಲ್ಲಿ ದುಸ್ಥಿತಿಯಲ್ಲಿವೆ. ಹಲವೆಡೆ ಸ್ಮಶಾನಗಳ ರಸ್ತೆಯು ಮುಚ್ಚಿ ಹೋಗಿದ್ದು, ವ್ಯಾಪಕವಾಗಿ ಹರಡಿಕೊಂಡಿರುವ ತ್ಯಾಜ್ಯ ಗಿಡಗಳ ನಡುವೆ ಹಾದು ಹೋಗಬೇಕಾಗಿದೆ. ಅಂತ್ಯಸಂಸ್ಕಾರ, ಪೂಜಾ ವಿಧಿವಿಧಾನಗಳನ್ನು ಕೈಗೊಳ್ಳಲು ನೀರಿನ ವ್ಯವಸ್ಥೆ ಇರುವುದಿಲ್ಲ. ಇದರ ಜತೆಗೆ ವಿದ್ಯುತ್ ದೀಪಗಳ ಸಮಸ್ಯೆ ಬೇರೆ. ಇನ್ನು ಅಕ್ರಮ ಒತ್ತುವರಿ ಕುರಿತು ಖುದ್ದು ಗ್ರಾಮಸ್ಥರೇ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಸ್ಮಶಾನಗಳಿಲ್ಲದ ಗ್ರಾಮಗಳಲ್ಲಿ ರುದ್ರಭೂಮಿಗೆ ಅಗತ್ಯ ಜಾಗವನ್ನು ಗುರುತಿಸಲಾಗಿದೆ. ವಿಶೇಷ ಅನುದಾನದಲ್ಲಿ ಸ್ಮಶಾನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ.

| ಆರತಿ ಆನಂದ್, ಹೆಚ್ಚುವರಿ ಜಿಲ್ಲಾಧಿಕಾರಿ