ನ.2ಕ್ಕೆ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

ಚಿಕ್ಕಮಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನ.2 ಮತ್ತು 3 ರಂದು ನಗರದಲ್ಲಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗೆ ತಂಡದ ಸದಸ್ಯರನ್ನು ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ರಾಜ್ಯದ 32 ಜಿಲ್ಲೆಗಳಿಂದ ಪ್ರತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ತಲಾ ಐದು ಬಾಲಕ, ಬಾಲಕಿಯರು ಸೇರಿ ಪಂದ್ಯಾವಳಿಯಲ್ಲಿ ಒಟ್ಟು 320 ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ. ಎಂ.ಡಿ.ಸುದರ್ಶನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ 31 ಸ್ಪರ್ಧೆಗಳು ನಡೆಯಲಿದ್ದು, ಬಾಲಕಿಯರ ವಿಭಾಗದ ಸ್ಪರ್ಧೆಗಳು ಆಫೀಸರ್ಸ್ ಕ್ಲಬ್​ನ ಬ್ಯಾಡ್ಮಿಂಟನ್ ಕೋರ್ಟ್​ನಲ್ಲಿ ಹಾಗೂ ಬಾಲಕರ ವಿಭಾಗದ ಸ್ಪರ್ಧೆಗಳು ಶತಮಾನೋತ್ಸವ ಕ್ರೀಡಾಂಗಣದ ಆವರಣದ ದೇವರಾಜ ಅರಸು ಬ್ಯಾಡ್ಮಿಂಟನ್ ಕೋರ್ಟ್​ನಲ್ಲಿ ನಡೆಯಲಿವೆೆ. ಬಾಲಕಿಯರಿಗೆ ಟಿಎಂಎಸ್ ಕಾಲೇಜು ಹಾಗೂ ಬಾಲಕರಿಗೆ ಸಂತ ಜೋಸೆಫರ ಬಾಲಕರ ಕಾನ್ವೆಂಟ್​ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಮೈಸೂರಿನಿಂದ ನಾಲ್ವರು ತೀರ್ಪಗಾರರ ಜತೆ ಸ್ಥಳೀಯ ಪ್ರೌಢಶಿಕ್ಷಣ ಇಲಾಖೆ ತರಬೇತುದಾರರು ತೀರ್ಪಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟದ ರ‍್ಯಾಂಕಿಂಗ್ ವಿಜೇತರೂ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ನ.2 ರಂದು ಬೆಳಗ್ಗೆ ನಗರದ ಟಿಎಂಎಸ್ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಸಾಂಕೇತಿಕವಾಗಿ ಪಂದ್ಯಾವಳಿ ಉದ್ಘಾಟಿಸಲಿದ್ದು, ಶಾಸಕ ಸಿ.ಟಿ.ರವಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು, ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಡಾ. ವೈ.ಎ.ಸುರೇಶ್, ಕಾರ್ಯದರ್ಶಿ ಕೆ.ಜಿ.ಸತೀಶ್ ಶಾಸ್ತ್ರಿ, ಕ್ರೀಡಾ ಕಾರ್ಯದರ್ಶಿ ಮಂಜುನಾಥ್, ಪ್ರಾಚಾರ್ಯರಾದ ಎಚ್.ಎಂ.ನಾಗರಾಜರಾವ್, ಬಿ.ಆರ್.ಶ್ರೀನಿವಾಸಮೂರ್ತಿ, ಉಪ ನಿರ್ದೇಶಕರ ಕಚೇರಿ ಸಹಾಯಕ ಜಿ.ಎಸ್.ಕುಮಾರ್, ಸುದ್ದಿಗೋಷ್ಠಿಯಲ್ಲಿದ್ದರು.