3146 ಕ್ವಿಂಟಾಲ್ ರಾಗಿ ಖರೀದಿ

ಪಿ.ಎಸ್. ಹರೀಶ್ ಕೋಲಾರ

ಜಿಲ್ಲೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ಬೆಂಬಲ ಬೆಲೆಗೆ ರಾಗಿ ಮಾರಾಟ ಮಾಡಿದ 49 ರೈತರಿಗೆ ಮೊದಲ ಹಂತದಲ್ಲಿ 31 ಲಕ್ಷ ರೂ. ಪಾವತಿಸಲಾಗಿದ್ದು, 89 ರೈತರಿಗೆ ಇನ್ನೂ 60 ಲಕ್ಷ ರೂ. ಪಾವತಿಸಬೇಕಿದೆ.

ಸರ್ಕಾರದ ನಿರ್ದೇಶನದಂತೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಜನವರಿಯಿಂದ ಮಾರ್ಚ್ 31ರವರೆಗೆ ಪ್ರತಿ ಕ್ವಿಂಟಾಲ್ ರಾಗಿಗೆ 2897 ರೂ. ಬೆಂಬಲ ಬೆಲೆ ನೀಡಿ ರೈತರಿಂದ ನೇರವಾಗಿ ಖರೀದಿಸಿದೆ. ಬೆಂಬಲ ಬೆಲೆಗೆ ಮಾರಾಟ ಮಾಡಲು 180ಕ್ಕೂ ಅಧಿಕ ರೈತರು ನೋಂದಾಯಿಸಿಕೊಂಡಿದ್ದರೂ ಕೇವಲ 134 ರೈತರು 3146 ಕ್ವಿಂಟಾಲ್ ರಾಗಿ ಮಾರಾಟ ಮಾಡಿದ್ದಾರೆ.

ಹಣ ಪಾವತಿ: ಒಟ್ಟು 234 ರೈತರಿಗೆ ಬೆಂಬಲ ಬೆಲೆಯಾಗಿ 91,15,902 ರೂ. ಪಾವತಿಸಬೇಕಿದ್ದು, ಮೊದಲ ಹಂತದಲ್ಲಿ 31.07 ಲಕ್ಷ ರೂ.ಗಳನ್ನು ರೈತರ ಖಾತೆಗಳಿಗೆ ಆರ್​ಟಿಜಿಎಸ್ ಮೂಲಕ ಜಮಾ ಮಾಡಲಾಗಿದೆ. ಈ ಪೈಕಿ ಬಂಗಾರಪೇಟೆ-24 ರೈತರಿಗೆ 17.54 ಲಕ್ಷ ರೂ, ಕೋಲಾರ-21 ರೈತರಿಗೆ 10.68 ಲಕ್ಷ ರೂ. ಮುಳಬಾಗಿಲು-4 ರೈತರಿಗೆ 2.83 ಲಕ್ಷ ರೂ. ಸಂದಾಯವಾಗಿದೆ. ಶ್ರೀನಿವಾಸಪುರ, ಮಾಲೂರು ಸೇರಿ ಇತರ ತಾಲೂಕುಗಳ 89 ರೈತರಿಗೆ 60 ಲಕ್ಷ ರೂ.ಗಳನ್ನು ಇನ್ನಷ್ಟೇ ಪಾವತಿಸಬೇಕಿದೆ.

ಬರದ ಹೊಡೆತ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆಯಿಲ್ಲದೆ 32,024 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆ ಶೇ.33ಕ್ಕಿಂತ ಹೆಚ್ಚಿನ ಪ್ರಮಾಣದ ಹಾನಿಯಾಗಿತ್ತು. ತಡವಾಗಿ ಬಿತ್ತನೆಯಾಗಿದ್ದ ಪ್ರದೇಶದಲ್ಲಿ ಅಕ್ಟೋಬರ್​ನಲ್ಲಿ ಬಿದ್ದ ಮಳೆಗೆ ರಾಗಿ ಸ್ವಲ್ಪ ಚೇತರಿಸಿಕೊಂಡರೂ ಇಳುವರಿ ಬರಲಿಲ್ಲ.

ಮಾರಾಟಕ್ಕೆ ನಿರಾಸಕ್ತಿ: ಜಿಲ್ಲೆಯ ಪ್ರಮುಖ ಆಹಾರ ಬೆಳೆ ರಾಗಿ. ಬರದ ನಡುವೆಯೂ ಅಲ್ಪಸ್ವಲ್ಪ ಇಳುವರಿ ಪಡೆದಿರುವ ರೈತರು ಮುಂದಿನ ವರ್ಷಕ್ಕೆ ಹೇಗೋ ಎಂದು ದಾಸ್ತಾನು ಮಾಡಿಕೊಂಡಿದ್ದಾರೆ. ಖಾಸಗಿ ಮಾರುಕಟ್ಟೆ, ಇಲ್ಲವೇ ಸಂತೆಯಲ್ಲಿ ಇಂದಿಗೂ ರಾಗಿ ಮಾರಾಟವಾಗುತ್ತಿದ್ದು, ಕ್ವಿಂಟಾಲ್​ಗೆ ಗರಿಷ್ಠ 2800 ರೂ. ಇದೆ. ಉತ್ತಮ ಗುಣಮಟ್ಟದ ರಾಗಿ ಕ್ವಿಂಟಾಲ್​ಗೆ 3000 ರೂ. ಧಾರಣೆ ಇದೆ.

ನಿಗಮವು ಬೆಂಬಲ ಬೆಲೆಗೆ ಖರೀದಿಸಿದ ರಾಗಿ ಗೋದಾಮುಗಳಲ್ಲಿ ದಾಸ್ತಾನಿದ್ದು, ಸರ್ಕಾರ ನಿರ್ದೇಶನ ನೀಡಿದ ನಂತರ ಪಡಿತರದಾರರಿಗೆ ವಿತರಿಸಲಾಗುವುದು. ಮೊದಲ ಹಂತದಲ್ಲಿ 49 ರೈತರಿಗೆ ಹಣ ಪಾವತಿಸಲಾಗಿದೆ. ಒಂದೆರಡು ವಾರದೊಳಗೆ ಸರ್ಕಾರದಿಂದ ಬಾಕಿ ಹಣ ಬಿಡುಗಡೆಯಾಗುವ ನಿರೀಕ್ಷೆಯಿದೆ.

| ವೈ. ಶಿವಣ್ಣ, ವ್ಯವಸ್ಥಾಪಕ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕೋಲಾರ

ಸರ್ಕಾರದ ಬೆಂಬಲ ಬೆಲೆಗೆ ರಾಗಿ ಮಾರಾಟ ಮಾಡಿದರೆ ಹಣ ಕೈ ಸೇರುವುದು ವಿಳಂಬವಾಗುವುದರಿಂದ ನಮ್ಮ ತುರ್ತು ಅಗತ್ಯಕ್ಕೆ ಪ್ರಯೋಜನವಾಗುವುದಿಲ್ಲ. ಹೀಗಾಗಿ ಸುಗಟೂರು ಹೋಬಳಿಯ ಅನೇಕ ರೈತರು ಚಿಂತಾಮಣಿ ಸಂತೆಯಲ್ಲಿ ರಾಗಿ ಮಾರಾಟ ಮಾಡುತ್ತಿದ್ದಾರೆ.

| ತಳವಾರ ಚೌಡಪ್ಪ, ರೈತ, ಕೋಲಾರ