More

    ಜಿಲ್ಲೆಯಲ್ಲಿ 31 ಕುಷ್ಠರೋಗ ಪ್ರಕರಣ ಪತ್ತೆ, ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಸಮೀಕ್ಷೆ*ರೋಗಿಗಳಿಗೆ ಎಂಆರ್‌ಸಿ ಪಾದರಕ್ಷೆ ವಿತರಣೆ

    ಶಿವರಾಜ ಎಂ. ಬೆಂಗಳೂರು
    ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 31 ಪ್ರಕರಣಗಳು ಪತ್ತೆಯಾಗಿವೆ.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮೀಕ್ಷೆಯಂತೆ ಪತ್ತೆಯಾಗಿರುವ ಒಟ್ಟು ಪ್ರಕರಣಗಳಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಕಾಯಿಲೆ ಅರಿವು ಮೂಡಿಸಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

    ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಪ್ರಕರಣಗಳು ಅತಿ ಕಡಿಮೆ ಎನ್ನಲಾಗಿದ್ದು,ದೇವನಹಳ್ಳಿ ಹಾಗೂ ಹೊಸಕೋಟೆ ತಾಲೂಕಿನಲ್ಲಿ ತಲಾ 11 ಪ್ರಕರಣಗಳು ಪತ್ತೆಯಾಗಿವೆ. ದೊಡ್ಡಬಳ್ಳಾಪುರದಲ್ಲಿ 5 ಹಾಗೂ ನೆಲಮಂಗಲದಲ್ಲಿ 4 ಪ್ರಕರಣಗಳು ಬೆಳಕಿಗೆ ಬಂದಿವೆ ಎಂಬುದು ಇಲಾಖೆ ಅಂಕಿ ಅಂಶದಲ್ಲಿ ತಿಳಿದುಬಂದಿದೆ.

    ಇಲಾಖೆ ಕ್ರಮ: ಜಿಲ್ಲೆಯಲ್ಲಿ ಅಷ್ಟೂ ಪ್ರಕರಣಗಳ ರೋಗಿಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳಿಗೆ ಎಂಆರ್‌ಸಿ ಪಾದರಕ್ಷೆಗಳನ್ನು ವಿತರಿಸಲಾಗಿದೆ. ರೋಗಿಗಳಿಗೆ ಸ್ವಯಂ ರಕ್ಷಣಾ ವಿಧಾನಗಳ ಬಗ್ಗೆ ವಿಶೇಷ ಶಿಬಿರಗಳನ್ನು ನಡೆಸಿ ಸ್ವಯಂ ರಕ್ಷಣಾ ಕಿಟ್‌ಗಳನ್ನು ವಿತರಿಸಲಾಗಿದೆ. ಜಿಲ್ಲೆಯ ಎಲ್ಲ ಆಶಾ ಕಾರ್ಯಕರ್ತೆಯರು ಕುಷ್ಠರೋಗಿಗಳನ್ನು ಖುದ್ದು ಭೇಟಿ ನೀಡಿ ಆರೋಗ್ಯ ರಕ್ಷಣೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

    ಗಾಂಧೀಜಿ ಕನಸು: ಭಾರತವನ್ನು ಕುಷ್ಠರೋಗ ಮುಕ್ತವಾಗಿಸುವುದು ಗಾಂಧೀಜಿ ಕನಸಾಗಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಭಾಗಿತ್ವದೊಂದಿಗೆ ಮನೆ ಮನೆಗೆ ತೆರಳಿ ರೋಗದ ಜಾಗೃತಿ ಮೂಡಿಸುವ ಅಭಿಯಾನ ನಡೆಸಲಾಗುತ್ತಿದೆ.

    ಹೆದರಿಕೆ ದೂರ ಮಾಡುವ ಉದ್ದೇಶ: ರೋಗದ ಬಗ್ಗೆ ಸಾರ್ವಜನಿಕರ ಭೀತಿ ದೂರ ಮಾಡಲು ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. 2017 ರಿಂದ ಈ ಅಭಿಯಾನ ಆರಂಭವಾಗಿದ್ದು, ಮಹಾತ್ನಗಾಂಧೀಜಿ ಹುತಾತ್ಮ ದಿನವನ್ನು ಕುಷ್ಠರೋಗ ನಿರ್ಮೂಲನಾ ದಿನವನ್ನಾಗಿ ಆಚರಿಸಲಾಗುತ್ತಿದೆ. ರೋಗವನ್ನು ಆರಂಭಿಕ ಹಂತದಲ್ಲೆ ಪತ್ತೆ ಮಾಡಿ, ವ್ಯಕ್ತಿಗೆ ಸಂಪೂರ್ಣ ಚಿಕಿತ್ಸೆ ನೀಡಿದರೆ ಸಂಪೂರ್ಣ ಗುಣಪಡಿಸಬಹುದು ಎಂಬುದರ ಬಗ್ಗೆ ಅಭಿಯಾನದಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಯುತ್ತಿದೆ.

    ರೋಗದ ವಿರುದ್ಧ ಸಮರ: ರೋಗದ ವಿರುದ್ಧ ಅಂತಿಮ ಸಮರ ಸಾರುವ ಧ್ಯೇಯದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜ.30 ರಿಂದ ಫೆ.13ರವರೆಗೆ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗ್ರಾಪಂಗಳಲ್ಲಿ ದೊಡ್ಡಮಟ್ಟದ ಅಭಿಯಾನ ಆರಂಭಿಸಿದೆ. ರೋಗದ ಬಗ್ಗೆ ಸಮಾಜದಲ್ಲಿ ಬೇರೂರಿರುವ ತಪ್ಪು ತಿಳಿವಳಿಕೆ ಹೋಗಲಾಡಿಸುವುದು, ಕುಷ್ಠರೋಗಕ್ಕೆ ಅಂಟಿಕೊಂಡಿರುವ ಕಳಂಕ ಹಾಗೂ ತಾರತಮ್ಯ ಭಾವನೆ ದೂರ ಮಾಡುವುದು, ಕುಷ್ಠರೋಗಿಗಳು ಸಮಾಜದ ಮುಖ್ಯವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.
    ರೋಗ ಚಿಹ್ಹೆ:
    ದೇಹದ ಮೇಲೆ ಯಾವುದೇ ಸ್ಪರ್ಶ ಜ್ಞಾನವಿಲ್ಲದ ತಿಳಿ-ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು ಕಾಣುವುದು. ಕೈ-ಕಾಲುಗಳಲ್ಲಿ ಜೋಮು ಹಿಡಿದು ಸ್ಪರ್ಶ ಜ್ಞಾನವಿಲ್ಲದಿರುವುದು ಮುಖ ಅಥವಾ ಕೈ-ಕಾಲುಗಳಲ್ಲಿ ಎಣ್ಣೆ ಸವರಿದಂತೆ ಹೊಳಪು ಇರುವುದು. ಇಂಥ ಚಿನ್ಹೆಗಳು ಕಾಣಿಸಿಕೊಂಡ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷಿಸಿ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮನವಿ ಮಾಡಿದ್ದಾರೆ.

    ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 31 ಪ್ರಕರಣ ಪತ್ತೆಯಾಗಿವೆ. ಮೈಕೋಬ್ಯಾಕ್ಟೀರಿಯಂ ಲೆಪ್ರೇ ಎಂಬ ಸೂಕ್ಷ್ಮ ಜೀವಾಣುವಿನಿಂದ ಬರುವ ಕುಷ್ಠರೋಗ ಮುಖ್ಯವಾಗಿ ಚರ್ಮ ಮತ್ತು ನರಗಳ ಮೇಲೆ ಪ್ರಭಾವ ಬೀರುತ್ತದೆ. ಸಕಾಲದಲ್ಲಿ ಚಿಕಿತ್ಸೆ ಪಡೆಯುವುದು ಉತ್ತಮ.
    ಮಂಜುಳಾದೇವಿ, ಜಿಲ್ಲಾ ಆರೋಗ್ಯಾಧಿಕಾರಿ ಬೆಂ.ಗ್ರಾಮಾಂತರ

     

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts