ಹಾನಗಲ್ಲ: ಅಡಕೆ, ಮಾವು, ಶುಂಠಿ, ಹಸಿಮೆಣಸಿನಕಾಯಿ ಬೆಳೆಗಳಿಗೆ ಜು. 31 ಬೆಳೆ ವಿಮಾ ಕಂತು ಪಾವತಿಸಲು ಕೊನೆಯ ದಿನವಾಗಿದೆ. ಪಹಣಿ ಪತ್ರಿಕೆಯಲ್ಲಿ ಪೋಡಿ, ಖಾತೆ ಬದಲಾವಣೆ, ಪಹಣಿ ಒಟ್ಟುಗೂಡಿಸಿದ ಸಮಸ್ಯೆ, ಕಳೆದ ಮೂರು ವರ್ಷ ಬೆಳೆ ಸಮೀಕ್ಷೆ ಕ್ಷೇತ್ರಗಳಿಗೆ ಹೊಂದಾಣಿಕೆಯಾಗದಿರುವ ರೈತರು ತೋಟಗಾರಿಕೆ ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಕಂತು ತುಂಬಲು ರೈತರು ಪರದಾಡುವಂತಾಗಿದೆ.
ಹಾನಗಲ್ಲ ತಾಲೂಕಿನಲ್ಲಿ 9444 ಹೆಕ್ಟೇರ್ ಅಡಕೆ, 3200 ಹೆಕ್ಟೇರ್ ಮಾವು, ಬಾಳೆ, ಶುಂಠಿ ಸೇರಿ ಒಟ್ಟು 15 ಸಾವಿರ ಹೆಕ್ಟೇರ್ ತೋಟಗಾರಿಕೆ ಕ್ಷೇತ್ರವಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 23,732 ರೈತರು ವಿಮೆ ಕಂತು ಪಾವತಿಸಿದ್ದರು. ಇದರಲ್ಲಿ ಹಾನಗಲ್ಲ ತಾಲೂಕಿನ 15,800 ರೈತರು ಪಾಲ್ಗೊಂಡಿದ್ದರು. ಪ್ರಸ್ತುತ ವರ್ಷ ಇದುವರೆಗೆ ಜಿಲ್ಲೆಯಲ್ಲಿ 8049 ರೈತರು, ತಾಲೂಕಿನಲ್ಲಿ 6208 ರೈತರು ಕಂತು ಪಾವತಿಸಿ ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಪ್ರಸ್ತುತ ವರ್ಷ ಕೇಂದ್ರ ಸರ್ಕಾರದ ಹವಾಮಾನ ಆಧಾರಿತ ಬೆಳೆ ವಿಮೆ ಮಾರ್ಗಸೂಚಿಯಂತೆ ಕಂತು ಪಾವತಿಸಲು ಕಳೆದ 2021-22 ಮತ್ತು 2022-23ನೇ ಸಾಲಿನಲ್ಲಿ ಬೆಳೆ ಸಮೀಕ್ಷೆ ನಡೆಸಿ ಬೆಳೆ ನಮೂದಿಸಿದ್ದರೆ ಮಾತ್ರ ಪ್ರಸಕ್ತ ವರ್ಷ ಈ ಕ್ಷೇತ್ರಗಳಿಗೆ ಬೆಳೆ ವಿಮೆ ಕಂತು ಪಾವತಿಸಲು ‘ಸಂರಕ್ಷಣೆ’ ಪೋರ್ಟಲ್ನಲ್ಲಿ ಅವಕಾಶ ನೀಡಲಾಗಿದೆ.
ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆ ವಿಮೆ ಕಂತು ಪಾವತಿಸುವ ಹಾಗೂ ಹೆಚ್ಚು ವಿಮೆ ಪರಿಹಾರವನ್ನೂ ಪಡೆಯುತ್ತಿರುವ ಹಾನಗಲ್ಲ ತಾಲೂಕಿನಲ್ಲಿ ಈ ಬಾರಿ ರೈತರು ಹೊಸ ಮಾರ್ಗಸೂಚಿಯಿಂದಾಗಿ ವಿಮೆಯಿಂದ ಹೊರಗುಳಿಯುವ ಆತಂಕ ಎದುರಾಗಿದೆ. ಈ ಹಿಂದಿನ 2 ವರ್ಷಗಳಲ್ಲಿ ಬೆಳೆದರ್ಶಕ ಆಪ್ ಮೂಲಕ ಸಮೀಕ್ಷೆ ಕೈಗೊಂಡು ಬೆಳೆ ನಮೂದಿಸುವಲ್ಲಿ ಲೋಪ ದೋಷಗಳಾಗಿವೆ. ಬಹಳಷ್ಟು ರೈತರು ಈ ಆಪ್ ಮೂಲಕ ಬೆಳೆ ನಮೂದು ಮಾಡಲು ಸಾಧ್ಯವಾಗಿಲ್ಲ. ಬೆಳೆ ವಿಮೆ ಕಂತು ತುಂಬಲು ಇಂತಹ ಮಾರ್ಗಸೂಚಿಗಳನ್ನು ಅಳವಡಿಸಿರುವುದರಿಂದ ತಾಲೂಕಿನ ಬಹಳಷ್ಟು ರೈತರು ಬೆಳೆ ವಿಮೆ ಕಂತು ತುಂಬುಲು ಸಾಧ್ಯವಾಗಿಲ್ಲ. ಈ ಸಮಸ್ಯೆ ಕುರಿತಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ರೈತರು, ಶಾಸಕರ ಹಾಗೂ ಸಂಸದರ ಗಮನ ಸೆಳೆದಿದ್ದಾರೆ. ಬೆಳೆ ವಿಮೆ ಕಂತು ತುಂಬುವ ಅವಧಿ ವಿಸ್ತರಿಸಿ, ಹಿಂದಿನಂತೆ ಬೆಳೆ ವಿಮೆ ತುಂಬಲು ಅವಕಾಶವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಕಳೆದೆರಡು ವರ್ಷದ ಹಿಂದೆ ಬೆಳೆ ಸಮೀಕ್ಷೆ ಕೈಗೊಂಡು ಸರಿಯಾದ ಬೆಳೆ ನಮೂದಿಸಿದ್ದರೆ ಮತ್ತು ಸಂರಕ್ಷಣೆ ತಂತ್ರಾಂಶಕ್ಕೆ ರೈತರ ಪಹಣಿಯಲ್ಲಿನ ಬದಲಾವಣೆಗಳನ್ನು ಇತ್ತೀಚಿನ ಭೂಮಿ ದತ್ತಾಂಶದ ದಾಖಲೆಗಳನ್ನು ಜೋಡಣೆ ಮಾಡಿದ್ದಲ್ಲಿ ಅಂಥ ರೈತರಿಗೆ ಯಾವುದೇ ತೊಂದರೆಯಿಲ್ಲ. ಪ್ರತಿ ವರ್ಷ ರೈತರು ಕಡ್ಡಾಯವಾಗಿ ಬೆಳೆ ಸಮೀಕ್ಷೆ ಮಾಡಿಕೊಳ್ಳಬೇಕು.
| ಮಂಜುನಾಥ ಬಣಕಾರ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕರು, ಹಾನಗಲ್ಲ