ಕೆ.ಎಂ.ದೊಡ್ಡಿ: ಸಮೀಪದ ಮಣಿಗೆರೆ ಗ್ರಾಮದ ಬಳಿ ಗುರುವಾರ ಬೆಳಗ್ಗೆ ಗೂಡ್ಸ್ ಟೆಂಪೋ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮಹಿಳೆಯರು ಸೇರಿದಂತೆ 30 ಜನರು ಗಾಯಗೊಂಡಿದ್ದಾರೆ.
ಗೂಡ್ಸ್ ಟೆಂಪೋ ಚಾಲಕ ದುಗೇಶ್ ಹಾಗೂ ವಾಹನದೊಳಗಿದ್ದ ತೊರೆಬೊಮ್ಮನಹಳ್ಳಿ ಗ್ರಾಮದ ವರಲಕ್ಷ್ಮೀ, ಶೆಟ್ಟಮ್ಮಣ್ಣಿ, ನಾಗರಾಜೇ ಅರಸ್, ಕಾಂಚನಾ, ಕಾಂತರಾಜೇ ಅರಸ್, ರೇಖಾಮಣಿ, ಸವಿತಾ, ಅರುಣ, ಮಾಲಿನಿ, ಮಂಜುಳಾ ಮಣಿ, ಭಾಗ್ಯಮಣಿ, ಸುಶೀಲಾಮಣಿ, ಸುಗುಣಮಣಿ, ವರಲಕ್ಷ್ಮೀಮಣಿ, ರಾಜಮಣಿ, ಯಶೋಧಾಮಣಿ, ಪುಟ್ಟಮಣಿ, ಶಿಲ್ಪಾವತಿ, ಸುರೇಖಾ ಮಣಿ, ಶಿಲ್ಪಾ, ಕಾಂತರಾಜು, ಚಂದನ್, ರಾಜೇಶ್, ಕಾರುಚಾಲಕ ರಾಜೇಶ್, ಅಭಿ, ಬಾಲು, ಚಂದನ್, ಮೋಹನ್ ಸೇರಿದಂತೆ 10 ಪುರುಷರು ಹಾಗೂ 20 ಮಹಿಳೆಯರಿಗೆ ಗಾಯಗಳಾಗಿವೆ.
ಮಡೇನಹಳ್ಳಿ ಗ್ರಾಮದ ದುರ್ಗೇಶ್ ತನ್ನ ಗೂಡ್ಸ್ ಟೆಂಪೋದಲ್ಲಿ ತೊರೆಬೊಮ್ಮನಹಳ್ಳಿ ಗ್ರಾಮದಿಂದ ಮೂಗನಕೊಪ್ಪಲು ಗ್ರಾಮಕ್ಕೆ ಸಾವಿನ ಕಾರ್ಯಕ್ಕೆ 25 ಜನರನ್ನು ಕರೆದೊಯ್ಯುತ್ತಿದ್ದರು. ಈ ವೇಳೆ ಮಣಿಗೆರೆ ಬಳಿ ಹೋಗುತ್ತಿದ್ದಾಗ ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿ ವಾಪಸಾಗುತ್ತಿದ್ದ ಬೆಂಗಳೂರು ಬನಶಂಕರಿ ನಿವಾಸಿಗಳಿದ್ದ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗೂಡ್ಸ್ ಟೆಂಪೋ ರಸ್ತೆ ಮಧ್ಯಭಾಗದಲ್ಲಿ ಮಗುಚಿ ಬಿದ್ದಿದೆ. ಅತ್ತ ಕಾರು ಸಂಪೂರ್ಣ ಜಖಂಗೊಂಡಿದೆ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಪಿಐ ಆನಂದ್ ಹಾಗೂ ಸಿಬ್ಬಂದಿ ಗಾಯಳುಗಳನ್ನು ಆಂಬುಲೆನ್ಸ್ ಮೂಲಕ ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮದ್ದೂರು ತಹಸೀಲ್ದಾರ್ ಡಾ.ಸ್ಮಿತಾ ರಾಮು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಾಳುಗಳ ಯೋಗಕ್ಷೇಮ ವಿಚಾರಣೆ
ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ಗುಣಮಟ್ಟದ ಚಿಕಿತ್ಸೆ ಕೊಡುವಂತೆ ಮಿಮ್ಸ್ ವೈದ್ಯರಿಗೆ ಸೂಚನೆ ನೀಡಿದರು.
ಇದಕ್ಕೂ ಮೊದಲು ಮಿಮ್ಸ್‌ಗೆ ಆಗಮಿಸಿದ ಶಾಸಕ ಕೆ.ಎಂ.ಉದಯ್, ಗಾಯಾಳುಗಳಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದರು. ಗೂಡ್ಸ್ ಗಾಡಿಯಲ್ಲಿ ಜನರನ್ನು ಸಾಗಿಸುವುದು ತಪ್ಪು. ಇದರ ಬಗ್ಗೆ ಕ್ರಮವಹಿಲಾಗುತ್ತದೆ. 30 ಜನರ ಪೈಕಿ ಇಬ್ಬರಿಗೆ ಮಾತ್ರ ಕಾಲು ಮುರಿದಿದ್ದು, ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರಿಗೆ ತಿಳಿಸಲಾಗಿದೆ. ಒಂದು ವೇಳೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೆ ವೈಯಕ್ತಿಕವಾಗಿ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.
ಸಾಕಷ್ಟು ಎಚ್ಚರಿಕೆ ನೀಡುತ್ತಿದ್ದರೂ ಸಹ ವಾಹನಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಜನ ಪ್ರಯಾಣಿಸಿ ಇಂತಹ ಅವಘಡಗಳಿಗೆ ತುತ್ತಾಗುತ್ತಿದ್ದಾರೆ. ಅದೃಷ್ಟವಶಾತ್ ಯಾವುದೇ ತೊಂದರೆ ಇಲ್ಲ. ಗಾಯಾಳುಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚಿಸಿದ್ದೇನೆ.
ಎನ್.ಚಲುವರಾಯಸ್ವಾಮಿ
ಜಿಲ್ಲಾ ಉಸ್ತುವಾರಿ ಸಚಿವ