30 ಮಂದಿ ಜಲಸಮಾಧಿ

<< ಮಂಡ್ಯದ ಕನಗನಮರಡಿಯಲ್ಲಿ ಕಾಲುವೆಗೆ ಬಿದ್ದ ಖಾಸಗಿ ಬಸ್ >>

ಪಾಂಡವಪುರ: ಮೊದಲೇ ದುಸ್ಥಿತಿಯಲ್ಲಿದ್ದ ಖಾಸಗಿ ಬಸ್​ನ ಚಾಲಕನ ಅಜಾಗರೂಕತೆ, ಅತಿವೇಗದ ಚಾಲನೆ 30 ಜೀವಗಳನ್ನು ಬಲಿ ಪಡೆದಿದೆ. 9 ಎಳೆಯ ಜೀವಗಳೂ ಬದುಕು ಕಾಣುವ ಮುನ್ನವೇ ಜಲಸಮಾಧಿಯಾಗಿವೆ. ಶನಿವಾರ ಮಧ್ಯಾಹ್ನ ಮಂಡ್ಯ ಜಿಲ್ಲೆ ಪಾಂಡವಪುರದಿಂದ ಹೊರಟಿದ್ದ ಖಾಸಗಿ ಬಸ್, ಕನಗನಮರಡಿ ಗ್ರಾಮದ ಬಳಿ ಇರುವ ವಿಶ್ವೇಶ್ವರಯ್ಯ ನಾಲೆಯ ಪಕ್ಕದ ರಸ್ತೆಯಲ್ಲಿ ಸಾಗುತ್ತಿದ್ದಾಗ ಹಠಾತ್ತನೇ ನಿಯಂತ್ರಣ ಕಳೆದುಕೊಂಡಿತು. ನಾಲೆಗೆ ಬಿದ್ದ ಬಸ್ ಕೆಲವೇ ಕ್ಷಣಗಳಲ್ಲಿ ಸಂಪೂರ್ಣವಾಗಿ ನೀರಲ್ಲಿ ಮುಳುಗಿತು. ಶಾಲಾ ಮಕ್ಕಳು ಸಹಿತ 30ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು.ಚಾಲಕ ಹಾಗೂ ನಿರ್ವಾಹಕ ಈಜಿ ಪ್ರಾಣ ಉಳಿಸಿಕೊಂಡಿದ್ದು, ನಂತರ ಪರಾರಿಯಾಗಿದ್ದಾರೆ.

ಬಸ್ಸಿಂದ ಜಿಗಿದ ಚಾಲಕ, ನಿರ್ವಾಹಕ!

ಇದ್ದಕ್ಕಿದ್ದಂತೆಯೇ ಬಸ್ ಅಡ್ಡಾದಿಡ್ಡಿಯಾಗಿ ಚಲಿಸಲಾರಂಭಿಸಿತು. ಈ ವೇಳೆ ಚಾಲಕ, ನಿರ್ವಾಹಕ ಬಸ್ ಬಿಟ್ಟು ಆಚೆ ಹಾರಿದರು. ನಾಲೆಯಲ್ಲಿ ಬಸ್ ಮುಳುಗಿ ನೀರು ತುಂಬಿ ಕೊಂಡಿತು. ಕಿಟಕಿಯಿಂದ ಆಚೆ ಬಂದೆ. ಅಷ್ಟರಲ್ಲಿ ಯಾರೋ ಬಂದು ನನ್ನನ್ನು ರಕ್ಷಣೆ ಮಾಡಿದರು ಎಂದು ವಿದ್ಯಾರ್ಥಿ ಲೋಹಿತ್ ಪ್ರತಿಕ್ರಿಯಿಸಿದ್ದಾನೆ.

ಕಿಟಕಿ ಒಡೆದು ಸಾವು ಗೆದ್ದರು!

ದುರಂತದ ವೇಳೆ ಸಾಹಸ ತೋರಿದ ಗಿರೀಶ್, ಲೋಹಿತ್ ಎಂಬುವವರು ಕಿಟಕಿ ಮೂಲಕ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ. ‘ಇದ್ದಕ್ಕಿದ್ದಂತೆ ಬಸ್ ನಾಲೆಗೆ ನುಗ್ಗಿತು. ನೋಡುನೋಡುತ್ತಿದ್ದಂತೆ ಬಸ್ ಮುಳುಗಿತು. ಆಂಜನೇಯನ ಕೃಪೆಯಿಂದ ಜೀವ ಉಳಿಯಿತು’ ಎಂದು ಗಿರೀಶ್ ಹೇಳಿದ್ದಾರೆ ಕಣ್ಣ ಮುಂದೆಯೇ ನಡೆದ ದುರಂತದಿಂದ ನನಗೆ ತೀವ್ರ ಆಘಾತವಾಗಿದೆ’ ಎಂದು ಸಾವು ಗೆದ್ದ ಗಿರೀಶ್ ಹೇಳಿದ್ದಾರೆ. ‘ಬಸ್ಸಿನಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರೂ ಇದ್ದರು. ಇನ್ನೇನು ಊರು ಹತ್ತಿರವಾಯ್ತು ಎನ್ನುವಾಗಲೇ ಬಸ್ ಚಾಲಕನ ನಿಯಂತ್ರಣ ತಪ್ಪಿ ನಾಲೆ ಕಡೆ ನುಗ್ಗಿತು. ಸುಮಾರು 20 ಅಡಿ ಆಳದ ನಾಲೆಯಲ್ಲಿ ಮುಳುಗಿದ ಬಸ್ ಮೇಲೆ ಎರಡು ಅಡಿ ನೀರು ನಿಂತಿತ್ತು. ಹಿಂದಿನ ಸೀಟಿನಲ್ಲಿ ಕಿಟಕಿ ಬಳಿ ನಾನು ಕುಳಿತಿದ್ದೆ. ಗಾಜು ಒಡೆದು ಹೊರಬಂದು ಈಜುತ್ತಾ ದಡ ಸೇರಿದೆ. ಈ ವೇಳೆ ಬಸ್​ನಿಂದ ಲೋಹಿತ್ ಕೂಡ ಹೊರಬಂದ. ಮತ್ತೆ ನೀರಿಗೆ ಧುಮುಕಿ ಅವನನ್ನೂ ದಡಕ್ಕೆ ಕರೆತಂದೆ. ದುರಂತ ನಡೆದ ಸ್ಥಳ ನಿರ್ಜನವಾಗಿತ್ತು. ಜೋರಾಗಿ ಕೂಗಿಕೊಂಡಾಗ ದೂರದಲ್ಲಿದ್ದವರು ಓಡಿ ಬಂದರು. ಆದರೆ, ಅಷ್ಟರಲ್ಲಾಗಲೇ ಎಲ್ಲವೂ ನಡೆದುಹೋಯ್ತು. ಜನರನ್ನು ಕಾಪಾಡಲು ಸಾಧ್ಯವಾಗಲಿಲ್ಲವೆಂಬ ನೋವಿದೆ. ಒಂದು ವೇಳೆ ಚಾಲಕ ಬಸ್ಸನ್ನು ಬಲಕ್ಕೆ ತೆಗೆದುಕೊಂಡಿದ್ದರೆ ಹೆಚ್ಚಿನ ಅಪಾಯ ಆಗುತ್ತಿರಲಿಲ್ಲವೇನೋ’ ಎಂದು ವಿವರಿಸಿದ್ದಾರೆ ಗಿರೀಶ್. ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ.

ನೋಡುನೋಡುತ್ತಿದ್ದಂತೆ ಬಸ್ ಮುಳುಗಿತು. ಹಿಂದಿನ ಸೀಟಿನಲ್ಲಿ ಕಿಟಕಿ ಬಳಿ ನಾನು ಕುಳಿತಿದ್ದೆ.ಗಾಜು ಒಡೆದು ಹೊರಬಂದು ಈಜಿ ದಡ ಸೇರಿದೆ.

| ಗಿರೀಶ್

 

ಏನೇನಾಯ್ತು

 • ಬೆಳಗ್ಗೆ 11.10ಕ್ಕೆ ಪಾಂಡವಪುರದಿಂದ ಮಂಡ್ಯಕ್ಕೆ ಹೊರಟ ಬಸ್
 • ಮಧ್ಯಾಹ್ನ 12 ಗಂಟೆ ವೇಳೆ ಚಾಲಕನ ಅಜಾಗರೂಕತೆಯಿಂದ ನಾಲೆಗೆ ಬಿದ್ದ ಬಸ್
 • ಕಿಟಕಿ ಒಡೆದು, ಈಜಿ ಇಬ್ಬರು ಪಾರು
 • ಸಹಾಯಕ್ಕಾಗಿ ಜನರನ್ನು ಕರೆಯುವಷ್ಟರಲ್ಲಿ ಸಂಪೂರ್ಣ ಮುಳುಗಿದ ಬಸ್
 • ರಕ್ಷಣಾ ಕಾರ್ಯಾಚರಣೆ ಆರಂಭ 
 • 30 ಮೃತದೇಹಗಳು ಹೊರಕ್ಕೆ

15 ವರ್ಷ ಓಡಿದ್ದ ಬಸ್​ಗೆ 30 ಜೀವ ಬಲಿ!

ಪಾಂಡವಪುರ/ಮಂಗಳೂರು: ಮಂಡ್ಯದ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ವಿಶ್ವೇಶ್ವರಯ್ಯ ನಾಲೆಗೆ ಬಿದ್ದು, 9 ಮಕ್ಕಳೂ ಸೇರಿ 30 ಜನರ ಬಲಿ ಪಡೆದ ಬಸ್ ಮಂಗಳೂರಲ್ಲಿ 15 ವರ್ಷ ಓಡಾಟ ನಡೆಸಿತ್ತು! ಕೊನೆಗೆ ಅಲ್ಲಿ ಸಂಚಾರಕ್ಕೆ ಅನುಮತಿ ಸಿಗದಿದ್ದಕ್ಕೆ ಮಂಡ್ಯದಲ್ಲಿ ಸಂಚರಿಸುತ್ತಿತ್ತು ಎಂಬ ಆಘಾತಕಾರಿ ಸಂಗತಿ ತಿಳಿದುಬಂದಿದೆ!!!

ರಾಜಕುಮಾರ್ ಎಂಬ ಹೆಸರಿನ ಕೆಎ 19 ಎ 5676 ಸಂಖ್ಯೆಯ ಈ ಬಸ್ 2001 ಏ.1ರಂದು ಸಾರಿಗೆ ಇಲಾಖೆಯಲ್ಲಿ ಶಂಕರ ವಿಠಲ ಕಂಪನಿ ಹೆಸರಲ್ಲಿ ಮೊದಲ ನೋಂದಣಿಯಾಗಿತ್ತು. ಆ ಬಳಿಕ ಮಂಗಳೂರಿನಲ್ಲೇ 8 ಮಂದಿ ಈ ಬಸ್ಸಿನ ಮಾಲೀಕರಾಗಿದ್ದರು. ಕೊನೆಯದಾಗಿ 2015 ಏ.1ರಂದು ಸುಲ್ತಾನ್ ಬತ್ತೇರಿ ರಸ್ತೆ ನಿವಾಸಿ ಶಾಂಭವಿ ಗುಜರನ್ ಅವರ ಹೆಸರಿನಿಂದ ಮಂಡ್ಯದ ಶ್ರೀನಿವಾಸ್ ಅವರಿಗೆ ಮಾರಾಟವಾಗಿತ್ತು. ಶಾಂಭವಿ ಗುಜರನ್ ಮಾಲೀಕತ್ವದಲ್ಲಿದ್ದಾಗ ಮಂಗಳೂರಿನ ಸ್ಟೇಟ್​ಬ್ಯಾಂಕ್-ಸುಲ್ತಾನ್​ಬತ್ತೇರಿ ನಡುವೆ ಸಂಚರಿಸುತ್ತಿತ್ತು. ಬಸ್ 15 ವರ್ಷ ಪೂರ್ಣಗೊಳಿಸಿದ ಕಾರಣ ಸಾರಿಗೆ ಇಲಾಖೆ ಸಂಚಾರಕ್ಕೆ ಅನುಮತಿ ನೀಡಿರಲಿಲ್ಲ. ಆ ಬಳಿಕ ಅದನ್ನು ಶ್ರೀನಿವಾಸ್ ಖರೀದಿಸಿ ಮಂಡ್ಯದಲ್ಲಿ ಸಂಚಾರಕ್ಕೆ ಬಳಸಿಕೊಂಡಿದ್ದರು ಎಂದು ಮಂಗಳೂರಿನ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಧಿಯಾಟವೇ ಬೇರೆ…: ಶನಿವಾರ ಮಧ್ಯಾಹ್ನ ಪಾಂಡವಪುರದಿಂದ ಮಂಡ್ಯಕ್ಕೆ ಸಂಚರಿಸುತ್ತಿದ್ದ ಬಸ್​ನಲ್ಲಿ ಎಂದಿನಂತೆ ಪ್ರಯಾಣಿಕರು ಹತ್ತಿದ್ದಾರೆ. ಅವರವರ ಧಾವಂತದಲ್ಲಿದ್ದ 30ಕ್ಕೂ ಹೆಚ್ಚು ಮಂದಿ ಇದ್ದರು. ಇವರಲ್ಲಿ ಕೆಲಸ ಮುಗಿಸಿ ಮನೆಗೆ ಹೊರಟವರು, ಶನಿವಾರ ಆಗಿದ್ದರಿಂದ ಅರ್ಧ ದಿನದ ತರಗತಿ ಮುಗಿಸಿ ಖುಷಿಯಿಂದ ವಾಪಸಾಗುತ್ತಿದ್ದ ಮಕ್ಕಳೂ ಇದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು.

ಚಿಕ್ಕಬ್ಯಾಡರಹಳ್ಳಿ ಬಳಿ ಶಾಲಾ ಮಕ್ಕಳು ಹತ್ತಿದ್ದರು. ಕನಗನಮರಡಿ ಗ್ರಾಮದ ಬಳಿ ಇರುವ ವಿಶ್ವೇಶ್ವರಯ್ಯ ನಾಲೆಯ ಪಕ್ಕದ ರಸ್ತೆಯಲ್ಲಿ ಬಸ್ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದೆ. ಬಸ್​ನಲ್ಲಿ ಚೀರಾಟ ಆರಂಭವಾಗಿದೆ. ಎಲ್ಲಿ, ಯಾರಿಗೆ ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲೇ ಬಸ್ ನಾಲೆಯೊಳಗೆ ನುಗ್ಗಿಯಾಗಿತ್ತು. ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಉಸಿರುಗಟ್ಟತೊಡಗಿತ್ತು. ಆಗ ಗಿರೀಶ್, ಲೋಹಿತ್ ಎಂಬ ಕಷ್ಟಪಟ್ಟು ಕಿಟಕಿ ಒಡೆದು ಹೊರಬಂದು ಜೀವ ಉಳಿಸಿಕೊಂಡಿದ್ದಾರೆ.

ದಡಕ್ಕೆ ಬಂದವರೇ ರಕ್ಷಣೆಗೆ ಕಿರುಚಿಕೊಂಡಿದ್ದಾರೆ. ಗಾಬರಿಯಲ್ಲೇ ಬಂದ ಅಕ್ಕಪಕ್ಕದವರು ರಕ್ಷಣಾ ಕಾರ್ಯಕ್ಕೆ ಮುಂದಾದರಾದರೂ ದುರದೃಷ್ಟವಶಾತ್ ಒಳಗಿದ್ದ ಯಾರನ್ನೂ ಬದುಕಿಸಲು ಸಾಧ್ಯವಾಗಿಲ್ಲ. ಅಷ್ಟರಲ್ಲಾಗಲೇ ಎಲ್ಲರೂ ಜಲಸಮಾಧಿಯಾಗಿದ್ದರು.

ದೌಡಾಯಿಸಿದ ಸಚಿವ ಪುಟ್ಟರಾಜು

ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಮುತುವರ್ಜಿ ವಹಿಸಿ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡತೊಡಗಿದರು. ಮೃತದೇಹಗಳನ್ನು ತ್ವರಿತವಾಗಿ ಹೊರತೆಗೆಸಿ, ಬಸ್ಸನ್ನು ನಾಲೆಯಿಂದ ಮೇಲಕ್ಕೆತ್ತಿಸಿದರು. ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಜನರು ಆಗಮಿಸಿ ಮಮ್ಮಲ ಮರುಗಿದರು. ಆದರೆ, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಹಿಂದಿನ ದುರಂತಗಳು

ಮೈಸೂರು, ಹಾಸನ ಸೇರಿ ರಾಜ್ಯದ ವಿವಿಧೆಡೆ ಕೆರೆ, ನಾಲೆಗಳಿಗೆ ಬಸ್ ಸೇರಿ ವಾಹನಗಳು ಬಿದ್ದು, ದುರಂತಗಳು ಸಂಭವಿಸುತ್ತಲೇ ಇದ್ದು, ಈಚೆಗೆ ಕೆಲ ವರ್ಷಗಳ ಪ್ರಮುಖ ದುರಂತಗಳ ಮಾಹಿತಿ ಇಲ್ಲಿದೆ.

 • ಮೈಸೂರು ನಗರದ ಹೊರ ವಲಯದಲ್ಲಿ 2010ರ ಡಿ. 14ರಲ್ಲಿ ಉಂಡಬತ್ತಿ ಕೆರೆಗೆ ಮಿನಿ ಬಸ್​ವೊಂದು ಉರುಳಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಹಾಗೂ ಸುತ್ತಮುತ್ತಲಿನ 31 ಜನ ಜಲಸಮಾಧಿಯಾಗಿದ್ದರು. ಬೀಗರ ಔತಣಕೂಟ ಮುಗಿಸಿ ವಾಪಸಾಗುವಾಗ ದುರಂತ ಸಂಭವಿಸಿತ್ತು.
 • ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ದೊಡ್ಡಕಮರಹಳ್ಳಿ ಗ್ರಾಮದಲ್ಲಿ 2018ರ ಆ. 5ರಂದು ಮಾರುತಿ ಕಾರೊಂದು ಹಾರಂಗಿ ಕಾಲುವೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು.
 • ಹಾಸನ ಜಿಲ್ಲೆ ಬೇಲೂರಿನ ಬಿಷ್ಟಮ್ಮನ ಕೆರೆಗೆ 2013ರ ಜುಲೈ 22ರಂದು ಕೆಎಸ್​ಆರ್​ಟಿಸಿ ಬಸ್ ಉರುಳಿ 8 ಜನ ಮೃತಪಟ್ಟಿದ್ದರು.
 • ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಜನಿವಾರ ಕೆರೆಗೆ 2016ರ ಜ. 9ರಂದು ಮಹೀಂದ್ರಾ ಸ್ಕಾರ್ಪಿಯೋ ಉರುಳಿ 7 ಜನ ಅಸುನೀಗಿದ್ದರು.
 • ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಹನುಮನಹಳ್ಳಿ ಕೆರೆಗೆ 2017ರ ಸೆ. 26ರಂದು ಮಾರುತಿ ಸ್ವಿಫ್ಟ್ ಕಾರು ಉರುಳಿ 5 ಜನರು ಜಲಸಮಾಧಿಯಾಗಿದ್ದರು.
 • ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ಜಾಗಟಗಲ್ ಗ್ರಾಮದ ಹತ್ತಿರದ 2013ರಲ್ಲಿ ನಾರಾಯಣಪುರ ಬಲದಂಡೆ ಕಾಲುವೆಗೆ ಟ್ರಾ್ಯಕ್ಟರ್ ಉರುಳಿ ಐವರು ಮೃತಪಟ್ಟಿದ್ದರು.

ವದೇಸಮುದ್ರದವರೇ ಹೆಚ್ಚು

 • ಬಸ್ಸಿನಲ್ಲಿದ್ದವರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ವದೇಸಮುದ್ರ ಗ್ರಾಮದವರು
 • 15 ಮಹಿಳೆಯರು, 6 ಪುರುಷರು, 9 ಮಕ್ಕಳು ಮೃತ
 • ಚಾಲಕ ಬಸ್ಸಿನಿಂದ ಜಗಿದು ಪರಾರಿ, ಆತನಿಗಾಗಿ ಶೋಧ
 • ಸ್ಥಳದಲ್ಲಿಯೇ ಎಲ್ಲರ ಶವ ಪರೀಕ್ಷೆ ನಡೆಸಿ, ವಾರಸುದಾರರಿಗೆ ಒಪ್ಪಿಸಲಾಯಿತು.

ಜೆಡಿಎಲ್​ಪಿ ಸಭೆ ಮುಂದೂಡಿಕೆ

ಬೆಂಗಳೂರು: ಮಂಡ್ಯದಲ್ಲಿ ಬಸ್ ದುರಂತ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ. ನಗರದ ಖಾಸಗಿ ಹೋಟೆಲ್​ನಲ್ಲಿ ಶನಿವಾರ ಸಂಜೆ ಸಭೆ ಆಯೋಜಿಸಲಾಗಿತ್ತು.

ಪ್ರತಿಯೊಬ್ಬರ ಹೃದಯ ಕಲಕುವ ಘೊರ ದುರಂತ. ದೃಶ್ಯ ನೋಡಿದರೆ ಹೃದಯ ಕಿತ್ತು ಬರುತ್ತದೆ. ಚಾಲಕನನ್ನು ಹಿಡಿದು ವಿಚಾರಣೆ ಮಾಡಬೇಕು. ಬಸ್ಸಿನ ಸಮಸ್ಯೆ ಏನಿತ್ತು? ಚಾಲಕನ ತಪ್ಪು ಏನಿತ್ತೆಂದು ತಿಳಿಯುತ್ತದೆ. ಇಂತಹ ಬಸ್​ಗೆ ಅವಕಾಶ ಕೊಟ್ಟಿದ್ದು ಸಾರಿಗೆ ಇಲಾಖೆ ತಪ್ಪು.

| ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ

 

ಮಂಗಳೂರಿನಲ್ಲಿ ಗುಜರಿಗೆ ಹಾಕುವ ಬಸ್​ಗಳನ್ನು ಇಲ್ಲಿ ತಂದು ಬಳಸುತ್ತಾರೆ. ಅದಕ್ಕೆ ಆರ್​ಟಿಒ ಅಧಿಕಾರಿಗಳು ಸಹಕಾರ ನೀಡುತ್ತಾರೆ. ಸರ್ಕಾರ ಸಾರಿಗೆ ಸಂಸ್ಥೆ ಬಸ್​ಗಳನ್ನು ಬಿಟ್ಟಿದ್ದರೆ, ಈ ದುರಂತ ನಡೆಯುತ್ತಿರಲಿಲ್ಲ. ಸರ್ಕಾರದ ತಪ್ಪಿನಿಂದಾಗಿ ಮೃತರ ಕುಟುಂಬಕ್ಕೆ ಕನಿಷ್ಠ 10 ಲಕ್ಷ ರೂ. ಪರಿಹಾರ ನೀಡಬೇಕು.

| ಪ್ರತಾಪ್​ಸಿಂಹ, ಸಂಸದ

 

ನೀರು ಸ್ಥಗಿತ

ಬಸ್ ಅಪಘಾತ ಸಂಭವಿಸಿದ ವೇಳೆ ವಿಶ್ವೇಶ್ವರಯ್ಯ ನಾಲೆಯಲ್ಲಿ ನೀರಿನ ರಭಸ ಜೋರಾಗಿತ್ತು. ಕಾರ್ಯಾಚರಣೆಗೆ ಸಮಸ್ಯೆಯಾಗದಿರಲು ನೀರನ್ನು ಸ್ಥಗಿತಗೊಳಿಸಲಾಯಿತು. ಹರಿವಿನ ಪ್ರಮಾಣ ತಗ್ಗಿದ ಬಳಿಕ ಕಾರ್ಯಾಚರಣೆ ಪೂರ್ಣಗೊಳಿಸಲಾಯಿತು. ಬಸ್ ಮೇಲೆತ್ತಿದ್ದ ಬಳಿಕ ಕೊಚ್ಚಿಹೋದವರಿಗಾಗಿ ಪತ್ತೆ ಕಾರ್ಯಾಚರಣೆ ನಡೆಸಲಾಯಿತು.

ಕಣ್ಣೀರಿಟ್ಟ ಸಿಎಂ 5 ಲಕ್ಷ ರೂ. ಪರಿಹಾರ

ಅವಘಡದ ಮಾಹಿತಿ ಸಿಗುತ್ತಿದ್ದಂತೆ ಪೂರ್ವ ನಿಗದಿತ ಕಾರ್ಯಕ್ರಮ ರದ್ದುಗೊಳಿಸಿ ಸ್ಥಳಕ್ಕಾಗಮಿಸಿದ ಸಿಎಂ ಎಚ್.ಡಿ.ಕುಮಾರಸ್ವಾಮಿ, ಕಣ್ಣೀರು ಹಾಕುತ್ತಲೇ ನೊಂದ ಕುಟುಂಬದವರಿಗೆ ಸಾಂತ್ವನ ಹೇಳಿದರು. ಮೃತರ ಕುಟುಂಬದವರಿಗೆ ತಲಾ ಐದು ಲಕ್ಷ ರೂ. ಪರಿಹಾರವನ್ನು ಸಿಎಂ ಘೋಷಿಸಿದರು. ಆಗ ಪ್ರತಿಭಟನೆ ನಡೆಸಿದ ಸ್ಥಳೀಯರು, ಹೆಚ್ಚಿನ ಪರಿಹಾರ ಕೊಡಬೇಕು ಎಂದು ಪಟ್ಟು ಹಿಡಿದರು. ಅಲ್ಲದೆ, ಪ್ರಯಾಣಕ್ಕೆ ಯೋಗ್ಯವಲ್ಲದ ಬಸ್ಸಿನಿಂದ ಅವಘಡ ಸಂಭವಿಸಿದೆ. ಇಲ್ಲಿಗೆ ಸರ್ಕಾರಿ ಬಸ್ ಸೌಲಭ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಿ.ಸಿ.ತಮ್ಮಣ್ಣ, ಸಾ.ರಾ.ಮಹೇಶ್, ಶಾಸಕ ರವೀಂದ್ರ ಶ್ರೀಕಂಠಯ್ಯ ಆಗಮಿಸಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಜಿಲ್ಲಾಧಿಕಾರಿ, ಎಸ್ಪಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು.

ಇಂದು ಅಂತ್ಯಕ್ರಿಯೆ

ಅಪಘಾತದಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರ ಭಾನುವಾರ ನಡೆಯಲಿದೆ. ಪ್ರಾರಂಭದಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ಮಾಡಬೇಕೆಂಬ ನಿರ್ಧಾರಕ್ಕೆ ಬರಲಾಗಿತ್ತಾದರೂ, ಮೃತರ ಸಂಬಂಧಿಕರು ತಾವೇ ವೈಯಕ್ತಿಕವಾಗಿ ಅಂತ್ಯಸಂಸ್ಕಾರ ಮಾಡುತ್ತೇವೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಅಪಘಾತ ಸ್ಥಳದಲ್ಲಿಯೇ ಸಾಮೂಹಿಕವಾಗಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ಶವ ಪರೀಕ್ಷೆ ಮುಗಿಸಿ ವಾರಸುದಾರರಿಗೆ ಒಪ್ಪಿಸುವುದು ಸ್ವಲ್ಪ ವಿಳಂಬವಾಯಿತು. ಈ ಹಿನ್ನೆಲೆಯಲ್ಲಿ ಸಂಬಂಧಿಕರು ಆಗಮಿಸಬೇಕಿದ್ದ ಕಾರಣ ಅಂತ್ಯಸಂಸ್ಕಾರವನ್ನು ಭಾನುವಾರಕ್ಕೆ ನಿಗದಿ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಈ ನಡುವೆ ಚಿಕ್ಕಾಡೆ ಗ್ರಾಮದ ಸೌಮ್ಯಾ ಎಂಬುವರ ಅಂತ್ಯಸಂಸ್ಕಾರ ಶನಿವಾರ ರಾತ್ರಿಯೇ ನೆರವೇರಿಸಲಾಗಿದೆ.

ಉತ್ಸವ ರದ್ದು

ಅಪಘಾತ ಹಿನ್ನೆಲೆ ಕೆರೆತೊಣ್ಣೂರಿನಲ್ಲಿ ಆಯೋಜಿಸಿದ್ದ ಮೂರು ದಿನದ ಉತ್ಸವವನ್ನು ರದ್ದುಗೊಳಿಸಲಾಗಿದೆ. ಶುಕ್ರವಾರ ರಾತ್ರಿಯಷ್ಟೇ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದ್ದರು. ಭಾನುವಾರ ರಾತ್ರಿ ಮುಕ್ತಾಯವಾಗಬೇಕಿತ್ತು.

ಒಂದೇ ಕುಟುಂಬದ ಆರು ಮಂದಿ ಸಾವು

ಸಹೋದರನ ಮನೆಯಲ್ಲಿ ಶನೈಶ್ಚರ ಸ್ವಾಮಿ ಪೂಜಾ ಕಾರ್ಯಕ್ಕೆ ಬರುತ್ತಿದ್ದ ಡಾಮನಹಳ್ಳಿಯ ಒಂದೇ ಕುಟುಂಬದ ನಾಗರಾಜು ಪತ್ನಿ ಮಂಜುಳಾ, ಮೊಮ್ಮಕ್ಕಳಾದ ಪ್ರೇಕ್ಷಾ, ಅನುಷಾ, ತಮ್ಮನ ಪುತ್ರಿ ರಾಧಾ, ದೊಡ್ಡಪ್ಪನ ಮಗಳು ಕಮಲಮ್ಮ, ಸಂಬಂಧಿಕರ ಪುತ್ರಿ ಲಿಖಿತಾ ಮೃತಪಟ್ಟಿದ್ದಾರೆ. ವದೇಸಮುದ್ರದ ಜಯಮ್ಮ, ಮೊಮ್ಮಕ್ಕಳಾದ ಕಲ್ಪನಾ ಹಾಗೂ ಸೌಮ್ಯಾ ಹಾಗೂ ಅದೇ ಗ್ರಾಮ ಕರಿಯ್ಯಯ್ಯ ಮತ್ತು ಮೊಮ್ಮಗ ಪ್ರಶಾಂತ್ ಮೃತಪಟ್ಟಿದ್ದಾರೆ.

ಕುಡಿತ, ಸ್ಟೇರಿಂಗ್ ಕಟ್ ಕಾರಣ?

ಚಾಲಕ ಮಹದೇವು ನಿತ್ಯ ಬಸ್ ಚಾಲನೆಗೆ ಮೊದಲು ಮದ್ಯಪಾನ ಮಾಡುತ್ತಿದ್ದ ಎಂಬ ದೂರುಗಳು ಕೇಳಿಬಂದಿವೆ. ಅಲ್ಲದೆ, ಸ್ಟೇರಿಂಗ್ ತುಂಡಾಗಿ ಚಾಲಕನ ನಿಯಂತ್ರಣಕ್ಕೆ ಸಿಗಲಿಲ್ಲವೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ವೇಗವಾಗಿ ಬಸ್ ಬರುತ್ತಿತ್ತು. ಈ ವೇಳೆ ಗುಂಡಿಗಳಿಂದ ನಿಯಂತ್ರಣ ಕಳೆದು ಮೊದಲು ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಹೊಡೆಯಬೇಕಿತ್ತು. ಆದರೆ, ಅದನ್ನು ತಪ್ಪಿಸಲು ಚಾಲಕ ಮುಂದಾದಾಗ ನಾಲೆಯತ್ತ ನುಗ್ಗಿದೆ ಎಂದು ಹೇಳಲಾಗುತ್ತಿದೆ. ‘ಬಸ್ ಬೀಳುತ್ತಿದ್ದಂತೆ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ನಾವು ಬಂದರೂ ಭಾರಿ ಪ್ರಮಾಣದಲ್ಲಿ ನೀರಿನ ಹರಿವಿದ್ದರಿಂದ ಜೀವ ಉಳಿಸಲು ಸಾಧ್ಯವಾಗಿಲ್ಲ’ ಎಂದು ಸ್ಥಳೀಯರು ವಿಜಯವಾಣಿಗೆ ತಿಳಿಸಿದ್ದಾರೆ.

ಬಸ್​ಗೆ ಪರ್ವಿುಟ್ ಇತ್ತೇ?

ಮಲ್ಲನಾಯಕನಕಟ್ಟೆಯ ಶ್ರೀನಿವಾಸ್ ಅವರು ಖರೀದಿಸಿದ್ದ ಬಸ್ ವಿಮೆ 2019ರ ಮೇ 15ರ ತನಕ ಚಾಲ್ತಿಯಲ್ಲಿದೆ. 2018ರ ನ.30ರ ತನಕ ತೆರಿಗೆ ಪಾವತಿಯಲ್ಲಿದ್ದು, ಅಗತ್ಯ ದಾಖಲೆಗಳಿವೆ. ಆದರೆ, ಬಸ್ ನಿಜಕ್ಕೂ ರಸ್ತೆಯಲ್ಲಿ ಸಂಚರಿಸಲು ಯೋಗ್ಯವಾಗಿತ್ತೇ? ಆರ್​ಟಿಒ ಅಧಿಕಾರಿಗಳು ಕಾಟಾಚಾರಕ್ಕೆ ದಾಖಲೆಗಳಲ್ಲಿ ಬಸ್ಸಿನ ಯೋಗ್ಯತೆಯನ್ನು ದೃಢೀಕರಿಸಿಕೊಟ್ಟಿದ್ದರೆ? ಮಂಡ್ಯದಲ್ಲಿ ಚಾಲನೆಗೆ ಪರ್ವಿುಟ್ ಇತ್ತೇ?ಎಂಬುದು ತನಿಖೆಯಿಂದ ಬಹಿರಂಗವಾಗಬೇಕಿದೆ.