ದೊಡ್ಡಪಟ್ಟಣಗೆರೆಯಲ್ಲಿ ರಾಸುಗಳ ಜಾತ್ರೆ

ಕಡೂರು: ದೊಡ್ಡಪಟ್ಟಣಗೆರೆಯ ಶ್ರೀ ಕಟ್ಟೆಹೊಳೆಯಮ್ಮ ಜಾತ್ರೆ ಅಂಗವಾಗಿ ದನಗಳ ಜಾತ್ರೆ ಗುರುವಾರ ಆರಂಭವಾಗಿದ್ದು ಒಂದು ತಿಂಗಳ ಕಾಲ ನಡೆಯಲಿದೆ. ಪ್ರತಿ ವರ್ಷ ದನಗಳ ಜಾತ್ರೆಯನ್ನು ಜಾತ್ರಾ ಸಮಿತಿ ಆಯೋಜಿಸುತ್ತ ಬರುತ್ತಿದ್ದು, ಸಾವಿರಾರು ರಾಸುಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತದೆ. ಮೊದಲ ದಿನ 65ಕ್ಕೂ ಹೆಚ್ಚು ರಾಸುಗಳು ಆಗಮಿಸಿವೆ.

ಕುರುಬಗೆರೆ ಮೈದಾನದಲ್ಲಿ ಜಾತ್ರೆಗೆ ವ್ಯವಸ್ಥೆ ಮಾಡಲಾಗಿದೆ. 61 ವರ್ಷಗಳಿಂದ ಅಮ್ಮನವರ ರಥೋತ್ಸವ ನಡೆದ ಬಳಿಕ ದನಗಳ ಜಾತ್ರೆಯನ್ನು ಆಯೋಜಿಸಲಾಗುತ್ತಿದೆ. ದೇವಾಲಯ ಸಮಿತಿಗೆ ಒಳಪಡುವ 14 ಗ್ರಾಮಗಳಾದ ದೊಡ್ಡಪಟ್ಟಣಗೆರೆ, ಕುರುಬಗೆರೆ, ಮರಡಿಹಳ್ಳಿ, ಮರಡಿಹಳ್ಳಿ ಭೋವಿ ಕಾಲನಿ, ಆಲಘಟ್ಟ, ಆಲಘಟ್ಟ ಗೊಲ್ಲರಹಟ್ಟಿ, ಕೆ.ಎಚ್.ಕೊಪ್ಪಲು, ಎರೆಹಳ್ಳಿ, ಜಿಗಣೆಹಳ್ಳಿ, ಪಂಚೆಹೊಸಹಳ್ಳಿ, ಗೌಡಯ್ಯನಕೊಪ್ಪಲು, ಎಸ್.ಜಿ.ಕೊಪ್ಪಲು, ಎನ್.ಜಿ.ಕೊಪ್ಪಲು, ರಾಮನಹಳ್ಳಿಯ ರಾಸುಗಳು ಇಲ್ಲಿಗೆ ಬರುತ್ತವೆ. ಅಲ್ಲದೆ ದೂರದ ಹಾಸನ, ಗಂಡಸಿ, ಅಜ್ಜಂಪುರ, ತರೀಕೆರೆ ಭಾಗಗಳ ರೈತರೂ ತಮ್ಮ ರಾಸುಗಳನ್ನು ಮಾರಾಟ ಮಾಡಲು ಬರುತ್ತಾರೆ.

ಒಂದು ಜೊತೆ ಎತ್ತಿನ ಬೆಲೆ 80 ಸಾವಿರದಿಂದ 1 ಲಕ್ಷ ರೂ.ವರೆಗೂ ಇದೆ. ನಿತ್ಯ ಲಕ್ಷಾಂತರ ರೂ. ವ್ಯವಹಾರ ನಡೆಯುತ್ತದೆ. ಜಾತ್ರೆಗೆ ಬರುವ ರೈತರಿಗೆ ದೇವಾಲಯ ಸಮಿತಿಯಿಂದ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತದೆ. ದನ-ಕರುಗಳಿಗೆ ನೀರಿನ ತೊಟ್ಟಿಗಳ ವ್ಯವಸ್ಥೆ ಇರುತ್ತದೆ. ಮೇವು ಮತ್ತು ನೆರಳಿನ ವ್ಯವಸ್ಥೆಯನ್ನು ರೈತರೇ ಮಾಡಿಕೊಳ್ಳುತ್ತಾರೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎಸ್.ಬಿ.ಹನುಮಂತಪ್ಪ ಮಾಹಿತಿ ನೀಡಿದರು.

ಕಟ್ಟೆಹೊಳೆಯಮ್ಮನ ದನಗಳ ಜಾತ್ರೆಗೆ ಬಂದು ಒಂದು ದಿನವಾದರೂ ರಾಸುಗಳನ್ನು ಕಟ್ಟಿದರೆ ಯಾವುದೆ ಕಾಯಿಲೆ ಬರುವುದಿಲ್ಲ ಎಂಬ ನಂಬಿಕೆ ಮೊದಲಿನಿಂದಲೂ ಇದೆ. ಆಕರ್ಷಕವಾದ ಒಂದು ಜೋಡಿಗೆ ಸಮಿತಿಯಿಂದ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು. ದೇವಾಲಯ ಸಮಿತಿ ಉಪಾಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ, ಖಜಾಂಚಿ ಮರಿಯಪ್ಪ ಇದ್ದರು.

ಹತ್ತಾರು ಬಾರಿ ನಾನು ರಾಸುಗಳನ್ನು ತಂದು ಮಾರಾಟ ಮಾಡಿ ಉತ್ತಮ ಬೆಲೆ ಪಡೆದಿದ್ದೇನೆ. ಜತೆಗೆ ದೂರದಿಂದ ಬಂದಿರುವ ರೈತರ ಸಂಪರ್ಕದಿಂದ ಅಲ್ಲಿನ ವ್ಯವಸಾಯ, ಹೈನುಗಾರಿಕೆ ವಿಷಯಗಳ ವಿನಿಮಯ ಮಾಡಿಕೊಳ್ಳುವುದರಿಂದ ನಮ್ಮಗಳ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ.

| ರಮೇಶ್, ಯರೇಹಳ್ಳಿ ರೈತ

ಕಟ್ಟೆಹೊಳೆಯಮ್ಮ ದೇವಾಲಯಕ್ಕೆ ಸೇರಿದ ಭೂಮಿಯಲ್ಲಿ ಪ್ರತಿ ವರ್ಷ ದನಗಳ ಜಾತ್ರೆ ನಡೆಯುತ್ತದೆ. ಇದಕ್ಕೆ 14 ಹಳ್ಳಿಗಳ ಸದಸ್ಯರು, ಗ್ರಾಮಸ್ಥರ ಸಹಕಾರ ಮುಖ್ಯವಾಗಿದೆ. ಯಾವುದೆ ಸಮಸ್ಯೆಗಳಿಲ್ಲದೆ ಹೊಳೆಯಮ್ಮ ಸುಸೂತ್ರವಾಗಿ ದನಗಳ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿದ್ದಾಳೆ.

| ಎಸ್.ಬಿ.ಹನುಮಂತಪ್ಪ, ದೇವಾಲಯ ಸಮಿತಿ ಅಧ್ಯಕ್ಷ

Leave a Reply

Your email address will not be published. Required fields are marked *