ಕಡೂರು: ತಾಲೂಕಿನಾದ್ಯಂತ ಮಳೆಯಾಗುತ್ತಿರುವುದರಿಂದ ಹರ್ಷ ಒಂದಡೆಯಾದರೆ ಕೆಲವಡೆ ಅತಿಯಾದ ಮಳೆಯಿಂದ ಸುಮಾರು 30 ಕೋಟಿ ರೂಪಾಯಿ ಹಾನಿ ಸಂಭವಿಸಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಎಮ್ಮೆದೊಡ್ಡಿ ಪ್ರದೇಶಕ್ಕೆ ಮತ್ತು ಮದಗದ ಕೆರೆಗೆ ಮಂಗಳವಾರ ಭೇಟಿ ನೀಡಿ ಅತಿವೃಷ್ಟಿಯಿಂದಾದ ಹಾನಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೋಟಗಳು, ಏಳೆಂಟು ಸೇತುವೆಗಳು, ರಸ್ತೆಗಳಿಗೆ ಹಾನಿಯಾಗಿದೆ. ಸಣ್ಣ ನೀರಾವರಿ ಇಲಾಖೆಗಳ ರಾಜಕಾಲುವೆ ಮತ್ತು ಇತರ ಕಾಲುವೆಗಳಿಗೂ ಹಾನಿಯಾಗಿದೆ. ಎಲ್ಲ ಇಲಾಖೆಗಳ ಅಧಿಕಾರಿ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಎರಡು ದಿನದೊಳಗಾಗಿ ಹಾನಿಯ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ತಹಸೀಲ್ದಾರ್‌ಗೆ ಸೂಚಿಸಲಾಗಿದೆ. ಈಗಾಗಲೇ ಹಾನಿಯಾಗಿರುವ 23 ಮನೆಗಳಿಗೆ 1.20 ಲಕ್ಷ ರೂ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಪರಿಹಾರ ದೊರಕಿಸಿಕೊಡಲಾಗಿದೆ ಎಂದು ತಿಳಿಸಿದರು.
ಕಳೆದೆರಡು ದಿನಗಳಲ್ಲಿ ಮಳೆ ಹೆಚ್ಚಾಗಿ ಮತ್ತಷ್ಟು ಮನೆಗಳಿಗೆ ಹಾನಿಯಾಗಿದ್ದು, ಪಿಡಿಒಗಳು ಕೂಡಲೇ ಸ್ಥಳ ಪರಿಶೀಲಿಸಿ ಪರಿಹಾರ ದೊರಕಿಸಿಕೊಡಲು ಸೂಚಿಸಿದ್ದೇನೆ. ಇದು ತಾತ್ಕಾಲಿಕ ಪರಿಹಾರವಾಗಿದ್ದು, ಹೆಚ್ಚಿನ ಪರಿಹಾರವನ್ನು ಸರ್ಕಾರ ನೀಡಲಿದೆ. ಮಳೆ ಹೆಚ್ಚಾಗಿರುವುದರಿಂದ ಸಾರ್ವಜನಿಕರು ರಾಜಕಾಲುವೆ, ಕೆರೆ ಏರಿ ಮೇಲೆ ವಾಹನಗಳಲ್ಲಿ ಸಂಚರಿಸಬಾರದು. ಹಳೆ ಮದಗದಕೆರೆ ಭಾಗದ ಕೆರೆ ಕೋಡಿಯ ಏರಿ ಅಪಾಯದ ಬಗ್ಗೆ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ತಾಪಂ ಇಒ ಸಿ.ಆರ್.ಪ್ರವೀಣ್ ಮಾತನಾಡಿ, ಹಾನಿಗೊಂಡ ಮನೆಗಳಿಗೆ 1.20 ಲಕ್ಷ ರೂ. ಪರಿಹಾರ ನೀಡುವ ಅವಕಾಶವಿದ್ದು, ಶೇ.25ಕ್ಕಿಂತ ಕಡಿಮೆ ಹಾನಿ ಸಂಭವಿಸಿದರೆ 6,500 ರೂ. ಪರಿಹಾರ ನೀಡಬಹುದು ಎಂದು ಹೇಳಿದರು.
ಪ್ರಭಾರ ತಹಸೀಲ್ದಾರ್ ಮಂಜುನಾಥ್‌ಸ್ವಾಮಿ ಮಾತನಾಡಿ, ಮನೆ ಹಾನಿಯಾದವರಿಗೆ 48 ಗಂಟೆಗಳಲ್ಲಿ ಸರ್ಕಾರದ ನಿಯಮಾನುಸಾರ ಪರಿಹಾರ ದೊರಕಿಸಿಕೊಡಲಾಗುವುದು. ಮಳೆ ಹೆಚ್ಚಾಗಿ ಮನೆಗಳು ಬಿದ್ದಿರುವ ಬಗ್ಗೆ ಸ್ಥಳೀಯ ಗ್ರಾಮಲೆಕ್ಕಾಧಿಕಾರಿಗಳಿಗೆ ವರದಿ ನೀಡಲು ಸೂಚಿಸಲಾಗಿದೆ ಎಂದರು.
ಸಣ್ಣ ನೀರಾವರಿ ಇಲಾಖೆ ಎಇಇ ದಯಾಶಂಕರ್, ಜೆಇ ಮಂಜುನಾಥ್, ಸಿಪಿಐ ದುರ್ಗಪ್ಪ, ಆರ್‌ಎಫ್‌ಒ ರಜಾಕ್‌ಸಾಬ್ ನದಾಫ್, ಬೀರೂರು ಮೆಸ್ಕಾಂ ಎಇಇ ನಂದೀಶ್, ನವೀನ್, ಗ್ರಾಪಂ ಅಧ್ಯಕ್ಷರಾದ ಪ್ರಕಾಶ್‌ನಾಯ್ಕ, ಶಶಿನಾಯ್ಕ, ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಸಂಧಿ ಕಲ್ಲೇಶ್, ಮುಖಂಡರಾದ ಹೊಗರೇಹಳ್ಳಿ ಶಶಿ, ಎಮ್ಮೆದೊಡ್ಡಿ ಸೋಮೇಶ್, ಮಲ್ಲೇಶ್ವರ ವಸಂತಕುಮಾರ್, ದಾಸಯ್ಯನಗುತ್ತಿ ಚಂದ್ರಪ್ಪ ಇತರರಿದ್ದರು.