30 ಚೀಲ ಅನ್ನಭಾಗ್ಯ ಅಕ್ಕಿ ವಶ

ತ್ಯಾಗರ್ತಿ: ನೀಚಡಿ ಮಾರ್ಗವಾಗಿ ಶಿಕಾರಿಪುರದಿಂದ ಸಾಗರಕ್ಕೆ ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಗ್ರಾಮಸ್ಥರು ಹಿಡಿದು ಮಂಗಳವಾರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರತಿದಿನ ಇದೇ ಮಾರ್ಗವಾಗಿ ಪಡಿತರ ಅಕ್ಕಿ ತುಂಬಿದ ವಾಹನ ಶಿಕಾರಿಪುರ ತಾಲೂಕಿನಿಂದ ಸಾಗರಕ್ಕೆ ತೆರಳುತ್ತಿತ್ತು ಎನ್ನಲಾಗಿದ್ದು, ಮಂಗಳವಾರ ವಾಹನವನ್ನು ತಡೆದು ಪರಿಶೀಲಿಸಿದಾಗ 30 ಚೀಲ ಅಕ್ಕಿ ಇರುವುದು ಕಂಡುಬಂದಿದೆ.

ಗ್ರಾಮಸ್ಥರು ಚಾಲಕನನ್ನು ವಿಚಾರಿಸಿದಾಗ, ಸಾಗರಕ್ಕೆ ಹೋಗಿ ತಾನು ಹೇಳಿದ ಜಾಗಕ್ಕೆ ಇಳಿಸಲು ಶಿಕಾರಿಪುರದ ಮಹಾವೀರ ಎಂಬುವರು ಹೇಳಿದ್ದಾರೆ ಎಂದು ವಾಹನ ಚಾಲಕ ರಿಯಾಜ್ ತಿಳಿಸಿದ್ದಾನೆ.

ನಂತರ ಗ್ರಾಮಸ್ಥರು ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಪಡಿತರ ಅಕ್ಕಿ ಹಾಗೂ ವಾಹನವನ್ನು ಅವರ ವಶಕ್ಕೆ ಒಪ್ಪಿಸಿದ್ದಾರೆ. ಇದನ್ನು ಪರಿಶೀಲಿಸಿದ ಅಧಿಕಾರಿಗಳು ಇದು ಪಡಿತರ ಅಕ್ಕಿ ಎಂದು ಖಚಿತಪಡಿಸಿದ್ದಾರೆ. ಆಹಾರ ಇಲಾಖೆ ನಿರೀಕ್ಷಕರಾದ ದೇವರಾಜ್, ಯೋಗೀಶ್ವರ್, ಪಿಎಸ್​ಐ ಬಸವರಾಜ್, ದಫೇದಾರ್ ಪ್ರವೀಣ್, ಪಿಡಿಒ ಆಶ್ಪಾಕ್​ಅಹಮದ್ ಮತ್ತಿತರರಿದ್ದರು.