ಅತ್ಯಾಚಾರಕ್ಕೆ ಮೂರು ವರ್ಷದ ಬಾಲಕಿ ಬಲಿ

ರಾಂಚಿ: ನೆರೆ ಮನೆಯವನಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದ ಮೂರು ವರ್ಷದ ಬಾಲಕಿ ಅತ್ಯಾಚಾರದ ವೇಳೆಯೇ ಮೃತಪಟ್ಟಿರುವ ಧಾರುಣ ಘಟನೆ ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ನಡೆದಿದೆ.

ಕೃತ್ಯವೆಸಗಿದ ಆರೋಪಿ ಬಂಧನ್‌ ಒರೋನ್‌(25) ಎಂಬಾತ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಕೈಗೊಂಡಿದ್ದಾರೆ.

ಪೊಲೀಸರ ಪ್ರಕಾರ, ಕುಲ್ಹುತೋಲಿ ಗ್ರಾಮದಲ್ಲಿ ಭಾನುವಾರ ಸಂಜೆ ಬಾಲಕಿ ಮನೆ ಮುಂದೆ ಆಟವಾಡುತ್ತಿದ್ದಳು. ಆಟವಾಡುತ್ತಲೇ ಬಾಲಕಿ ಒರೋನ್‌ನ ಮನೆಗೆ ತೆರಳಿದ್ದಾಳೆ. ಆತನ ಹೆಂಡತಿಯೂ ಮನೆಯಲ್ಲಿರದಿದ್ದರಿಂದ ಒಬ್ಬನೇ ಇದ್ದ ಒರೋನ್‌ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಪಾಲಕರು ಮಾರ್ಕೆಟ್‌ಗೆ ಹೋಗಿದ್ದರು.

ನಂತರ ಮನೆಗೆ ಬಂದ ಪಾಲಕರಿಗೆ ಬಾಲಕಿಯು ತನ್ನ ಮನೆಯಲ್ಲಿ ಮಲಗಿರುವುದಾಗಿ ತಿಳಿಸಿದ್ದಾನೆ. ಆಗ ಮನೆಗೆ ಕರೆದೊಯ್ದ ಪಾಲಕರಿಗೆ ಬಾಲಕಿ ಬಟ್ಟೆಯಲ್ಲಿ ರಕ್ತ ಪತ್ತೆಯಾಗಿದೆ. ನಂತರ ಬಾಲಕಿ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾಳೆ.

ಪೋಷಕರು ಈ ವಿಚಾರವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆರೋಪಿ ಪರಾರಿಯಾಗಿದ್ದಾನೆ. ಘಟನೆ ಕುರಿತಂತೆ ಸೋಮವಾರ ಮುಂಜಾನೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.

ಆರೋಪಿ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. (ಏಜೆನ್ಸೀಸ್)