ಬಾಯ್ಲರ್​ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರ ಸಾವು

ಹಾರೋಹಳ್ಳಿ (ರಾಮನಗರ): ಸ್ವಚ್ಛತಾ ಕಾರ್ಯಕ್ಕಾಗಿ ಬಾಯ್ಲರ್​ ಒಳಗೆ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಹಳ್ಳಿಯ ಕೈಗಾರಿಕೆ ಪ್ರದೇಶದಲ್ಲಿರುವ ಆಂಥ್ಯಾಮ್​ ಬಯೋಸೈನ್​ ಕಾರ್ಖಾನೆಯಲ್ಲಿ ಈ ದುರ್ಘಟನೆ ನಡೆದಿದೆ. ಮಂಗಳವಾರ ಮಧ್ಯರಾತ್ರಿ ಬಾಯ್ಲರ್​ ಒಳಗೆ ಇಳಿದಿದ್ದ ಕಾರ್ಮಿಕರು ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಕೋಲಾರ ಜಿಲ್ಲೆ ಮುಳಬಾಗಿಲು ಮೂಲದ ಲೋಕೇಶ್, ಕನಕಪುರ ತಾಲೂಕಿನ ಗೊಟ್ಟಿಗೆಹಳ್ಳಿ ನಿವಾಸಿ ಮಹೇಶ್, ತಮಿಳುನಾಡು ಮೂಲದ ಶರವಣ ಮೃತಪಟ್ಟಿದ್ದಾರೆ. ಹರಿ ವಿಲಿಘನ್ ಎಂಬುವವರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾರೋಹಳ್ಳಿ ಪೊಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.