ಪುಲ್ವಾಮಾ ಕಾರ್ಯಾಚರಣೆಯಲ್ಲಿ ನಾಲ್ವರು ಲಷ್ಕರ್‌ ಇ ತೋಯ್ಬಾ ಉಗ್ರರನ್ನು ಹತ್ಯೆ ಮಾಡಿದ ಸೇನಾಪಡೆ ಸಿಬ್ಬಂದಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಸೇನಾಪಡೆ ಸಿಬ್ಬಂದಿ ಲಷ್ಕರ್​ ಎ ತೊಯ್ಬಾದ ನಾಲ್ವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಈ ಘಟನೆಯಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ.

ಪುಲ್ವಾಮಾ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಶ್ರೀನಗರ ಮೂಲದ ರಕ್ಷಣಾ ವಕ್ತಾರ ಕರ್ನಲ್​ ರಾಜೇಶ್‌ ಕಲಿಯ ತಿಳಿಸಿದ್ದಾರೆ.

ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಸೋಮವಾರ ಮುಂಜಾನೆ ಭದ್ರತಾಪಡೆಯು ಲಸ್ಸಿಪೋರಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಉಗ್ರರು ಏಕಾಏಕಿ ಭದ್ರತಾಪಡೆ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾಪಡೆಯು ಪ್ರತಿದಾಳಿ ನಡೆಸಿದೆ.

ಎರಡು ಎಕೆ 47 ರೈಫಲ್ಸ್‌, 1 ಎಸ್‌ಎಲ್‌ಆರ್‌ ಮತ್ತು ಒಂದು ಪಿಸ್ತೂಲ್‌ ಸೇರಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಮೊನ್ನೆಯಷ್ಟೇ ಪುಲ್ವಾಮದಲ್ಲಿ ಭದ್ರತಾ ಪಡೆ ಶಿಬಿರದ ಮೇಲೆ ಗ್ರೇನೇಡ್‌ ದಾಳಿ ನಡೆದ ಬೆನ್ನಲ್ಲೇ ಉಗ್ರರ ದಮನಕ್ಕೆ ಶೋಧಕಾರ್ಯ ಕೈಗೊಳ್ಳಲಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನೇಮಕಗೊಂಡಿದ್ದ ಯೋಧರಿಗೆ ಗ್ರೇನೇಡ್‌ ದಾಳಿಯಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದವು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)