ಭದ್ರತಾ ಕೊಠಡಿಗಳಿರುವ ಕಟ್ಟಡಕ್ಕೆ ಮೂರು ವಲಯದ ಭದ್ರತೆ

ಚಿತ್ರದುರ್ಗ: ಚಿತ್ರದುರ್ಗ ಲೋಕಸಭೆ ಎಸ್‌ಸಿ ಮೀಸಲು ಕ್ಷೇತ್ರದ ಡಿ ಮಸ್ಟರಿಂಗ್ ಪೂರ್ಣಗೊಂಡು ಅಭ್ಯರ್ಥಿಗಳ ಭವಿಷ್ಯ ಅಡಗಿರುವ ಮತಯಂತ್ರಗಳನ್ನು ನಗರದ ಸರ್ಕಾರಿ ವಿಜ್ಞಾನ ಕಾಲೇಜು ಹೊಸ ಕಟ್ಟಡ ಭದ್ರತಾ ಕೊಠಡಿಗಳಲ್ಲಿಟ್ಟು ಬೀಗ ಮುದ್ರೆ ಹಾಕುವ ಕಾರ‌್ಯ ಭರದಿಂದ ಸಾಗಿದೆ.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ, ಕ್ಷೇತ್ರ ವ್ಯಾಪ್ತಿಯ 8 ತಾಲೂಕುಗಳ ಪೈಕಿ ಮಳೆಕಾರಣದಿಂದಾಗಿ ಶಿರಾ ಮತ್ತು ಪಾವಗಡದಿಂದ ಬೆಳಗ್ಗೆ ಮತಯಂತ್ರಗಳು ಬಂದಿವೆ. ಅಭ್ಯರ್ಥಿ ಅಥವಾ ಏಜೆಂಟರ ಸಮ್ಮುಖದಲ್ಲಿ ಫಾರಂ 17 ಅನ್ವಯದಂತೆ ಚಾಲೆಂಜಿಂಗ್ ವೋಟು ಹಾಗೂ ಮತದಾನ ವಿವರ ಪರಿಶೀಲನೆ ಇಂದು ನಡೆಯಲಿದೆ.

ಇದರಿಂದಾಗಿ ಮತ ಎಣಿಕೆ ದಿನ ಎಣಿಕೆದಿನದಂದು ಯಾವುದೇ ಗೊಂದಲಗಳಿಗೆ ಅವಕಾಶವಾಗದು. ಭದ್ರತಾ ಕೊಠಡಿಗಳಿರುವ ಕಟ್ಟಡ ಮುಖ್ಯದ್ವಾರವನ್ನು ಮತ ಎಣಿಕೆ ನಡೆಯುವ ಮೇ 23 ಮೂರು ದಿನ ತೆರೆದು ಎಣಿಕೆಗೆ ಸಿದ್ಧತೆ ನಡೆಸಲಾಗುವುದು. ನಿತ್ಯವೂ ತಾವು ಅಥವಾ ಎಆರ್‌ಒ ಹಾಗೂ ಎಸ್ಪಿ ಲಾಗ್‌ಬುಕ್‌ಗೆ ಸಹಿ ಮಾಡಲಿದ್ದಾರೆ.

ಕಟ್ಟಡದ ಸುತ್ತ ಬ್ಯಾರೇಕಡ್ ನಿರ್ಮಿಸಿ, ಮೂರು ವಲಯದಲ್ಲಿ ಭದ್ರತೆಯನ್ನು ನಿಯೋಜಿಸಲಾಗಿದೆ. ಕಟ್ಟಡ ಹೊರ ಭಾಗದಲ್ಲಿ ರಾಜ್ಯದ ಸ್ಥಳೀಯ ಪೊಲೀಸರು ಮತ್ತೊಂದು ಸುತ್ತಿನಲ್ಲಿ ಸ್ಥಳೀಯ ಸಶಸ್ತ್ರ ಪೊಲೀಸ್ ಪಡೆ ಹಾಗೂ ಭದ್ರತಾ ಕೊಠಡಿ ಬಳಿ ಸಿಆರ್‌ಪಿಎಫ್ ಸಿಬ್ಬಂದಿ ನಿಯೋಜಿಸಲಾಗಿದೆ. 40ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳಿವೆ. ಅಗ್ನಿ ಅವಘಡ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭದ್ರತಾ ಸಿಬ್ಬಂದಿಗೆ ಕಟ್ಟಡ ಸಮೀಪದಲ್ಲಿ ವಸತಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

Leave a Reply

Your email address will not be published. Required fields are marked *