More

    3 ಲಕ್ಷಕ್ಕಿಳಿದ ಪರಿಹಾರ ಮೊತ್ತ

    ಬೆಳಗಾವಿ: ಪ್ರವಾಹ ಮತ್ತು ಧಾರಾಕಾರ ಮಳೆಯಿಂದ ಹಾನಿಗೀಡಾಗಿದ್ದ ಬಿ ವರ್ಗದ ಮನೆಗಳ ದುರಸ್ತಿ ಪರಿಹಾರ ಮೊತ್ತವನ್ನು ಸರ್ಕಾರ 3 ಲಕ್ಷ ರೂ.ಗೆ ಇಳಿಸಿದ್ದು, ಮನೆ ಕೆಡವಿ ಮರು ನಿರ್ಮಾಣಕ್ಕೆ ಸಂತ್ರಸ್ತರು ಹಿಂದೇಟು ಹಾಕುತ್ತಿದ್ದಾರೆ.

    ರಾಜ್ಯದಲ್ಲಿ 2019 ಆಗಸ್ಟ್‌ನಿಂದ ಅಕ್ಟೋಬರ್ ಅವಧಿಯಲ್ಲಿ ಸಂಭವಿಸಿದ ಪ್ರವಾಹ ಮತ್ತು ಧಾರಾಕಾರ ಮಳೆಯಿಂದ ಸಂಪೂರ್ಣ ಹಾಳಾಗಿರುವ ಬಿ ವರ್ಗದ ಮನೆಗಳ ದುರಸ್ತಿ ಸೇರಿ ಇತ್ಯಾದಿ ಕಾಮಗಾರಿ ಕೈಗೊಳ್ಳಲು ಸರ್ಕಾರ 5 ಲಕ್ಷ ರೂ. ನೀಡಲು ಈ ಮೊದಲು ನಿರ್ಧರಿಸಿತ್ತು. ಆದರೆ, ಇದೀಗ ಆ ಮೊತ್ತವನ್ನು 3 ಲಕ್ಷ ರೂ.ಗೆ ನಿಗದಿ ಮಾಡಿ ಅದನ್ನು ಎರಡು ಕಂತಿನಲ್ಲಿ ನೀಡಲು ನಿರ್ಧರಿಸಿದೆ. ಇದು ಪ್ರವಾಹ ಸಂತ್ರಸ್ತರ ಅಸಮಾಧಾನಕ್ಕೆ ಕಾರಣವಾಗಿದೆ.

    ಈಗಾಗಲೇ ಸರ್ಕಾರವು ನೆರೆಯಿಂದ ಹಾಳಾಗಿರುವ ಮನೆಗಳಿಗೆ ಪರಿಹಾರ ನೀಡಲು ಎ, ಬಿ ಮತ್ತು ಸಿ ಮೂರು ಕೆಟಗರಿಗಳನ್ನಾಗಿ ವಿಂಗಡಿಸಿ ಎ ಮತ್ತು ಬಿ ಕೆಟಗೇರಿ ಮನೆಗಳ ಮರು ನಿರ್ಮಾಣಕ್ಕೆ 5 ಲಕ್ಷ ರೂ. ಮತ್ತು ಸಿ ಕೆಟಗರಿ ಮನೆ ದುರಸ್ತಿಗೆ 50 ಸಾವಿರ ರೂ. ಪರಿಹಾರ ನೀಡಲು ನಿರ್ಧರಿಸಿತ್ತು. ಎ ಕೆಟಗರಿ ಮನೆಗಳಿಗೆ ಮಾತ್ರ 5 ಲಕ್ಷ ಪರಿಹಾರ ನೀಡಲು ಹಾಗೂ ಬಿ ಕೆಟಗರಿಗೆ 3 ಲಕ್ಷ ರೂ. ಮಾತ್ರ ಪರಿಹಾರ ನೀಡಲು ಮುಂದಾಗಿದೆ. ಸರ್ಕಾರದ ಈ ತೀರ್ಮಾನ ಹಾಗೂ ಆರ್ಥಿಕ ಸಮಸೆ, ಇನ್ನಿತರ ಕಾರಣಗಳಿಂದ ಸಂತ್ರಸ್ತರು ಮನೆಗಳನ್ನು ಸಂಪೂರ್ಣ ಕೆಡವಿ ಹೊಸ ಮನೆ ನಿರ್ಮಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

    ರಾಜ್ಯದಲ್ಲಿ ನೆರೆಯಿಂದ ಹಾನಿಯಾಗಿದ್ದ ಮನೆಗಳ ನಿರ್ಮಾಣಕ್ಕೆ ಪರಿಹಾರ ನೀಡುವಂತೆ 1,30,595 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 70,335 ಫಲಾನುಭವಿಗಳಿಗೆ ಮಾತ್ರ ಪರಿಹಾರ ವಿತರಣೆಯಾಗಿದೆ. ಸಲ್ಲಿಕೆಯಾಗಿರುವ ಅರ್ಜಿಯಲ್ಲಿ 7 ಲಕ್ಷಕ್ಕೂ ಅಧಿಕ ಬಿ ವರ್ಗದ ಮನೆಗಳ ಲಾನುಭವಿಗಗಳಿದ್ದಾರೆ ಎಂದು ಕಂದಾಯ ಹಾಗೂ ವಸತಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ದುರಸ್ತಿ ನಂತರ ಪರಿಹಾರ: ನೆರೆಯಲ್ಲಿ ಭಾಗಶಃ ಹಾನಿಗೀಡಾದ ಬಿ ವರ್ಗದ ಮನೆಗಳನ್ನು ಸಂಪೂರ್ಣ ಕೆಡವಿ, ಹೊಸದಾಗಿ ನಿರ್ಮಾಣಕ್ಕೆ 5 ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ಸೂಚಿಸಿತ್ತು. ಆದರೆ, ಇದೀಗ ಸಂತ್ರಸ್ತರು ಹೊಸದಾಗಿ ಮನೆ ಬದಲಾಗಿ ದುರಸ್ತಿ ಮಾಡಿಕೊಳ್ಳಲು ಮುಂದಾದರೆ ಮೊದಲು ಘೋಷಿಸಿದ್ದ 5 ಲಕ್ಷ ರೂ. ಪರಿಹಾರ ಬದಲಾಗಿ ಹೊಸ ನಿಯಮದಂತೆ 3 ಲಕ್ಷ ರೂ. ನೀಡಲು ನಿರ್ಧರಿಸಿದೆ. ಮನೆ ದುರಸ್ತಿ ಮಾಡಿದ ನಂತರ 2 ಹಂತದಲ್ಲಿ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ, ಜಿಪಂ ಸಿಇಒಗಳಿಗೆ ವಸತಿ ಇಲಾಖೆ ಅಧೀನ ಕಾರ್ಯದರ್ಶಿ ಸದಾನಂದ ಎನ್. ಪಾವಸ್ಕರ್ ಸೂಚಿಸಿದ್ದಾರೆ.

    ಘಟಪ್ರಭಾ ನದಿ ಪ್ರವಾಹದಲ್ಲಿ ನಮ್ಮ ಮನೆ ಸಂಪೂರ್ಣ ಜಲಾವೃತಗೊಂಡು ಅಲ್ಲಲ್ಲಿ ಬಿರುಕು ಬಿಟ್ಟಿದೆ. ಇದೀಗ ಸರ್ಕಾರ 5 ಲಕ್ಷ ರೂ. ಬದಲಾಗಿ 3 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳುತ್ತಿದೆ. ಮನೆಯನ್ನು ಸಂಪೂರ್ಣ ನೆಲಸಮ ಮಾಡಿ ಹೊಸ ಮನೆ ಕಟ್ಟಲು ಕನಿಷ್ಠ 10 ಲಕ್ಷ ರೂ. ಬೇಕು. ಮನೆಗಳ ದುರಸ್ತಿಗೆ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡಿದ್ದರೆ ಅನುಕೂಲವಾಗುತ್ತಿತ್ತು.
    | ಗಂಗಮ್ಮ ಎಂ. ಕೊಲಕೊಪ್ಪ,
    ಮಹಾದೇವ ಎಂ. ಪಾಟೀಲ
    ಗೋಕಾಕ ತಾಲೂಕಿನ ಸಂತ್ರಸ್ತರು

    ನೆರೆಯಿಂದ ಹಾನಿಯಾಗಿರುವ ಬಿ ವರ್ಗದ ಮನೆಗಳ ದುರಸ್ತಿಗೆ ಸರ್ಕಾರ 3 ಲಕ್ಷ ರೂ. ಮಾತ್ರ ಪರಿಹಾರ ನೀಡಲು ಆದೇಶಿಸಿದೆ. ಸಿ ವರ್ಗದ ಮನೆಗಳ ದುರಸ್ತಿಗೆ ಈ ಮೊದಲು ತೀರ್ಮಾನಿಸಿದಂತೆ 50 ಸಾವಿರ ರೂ. ಮೊತ್ತದಲ್ಲಿ ಯಾವುದೇ ಬದಲಾವಣೆ ಇಲ್ಲ.
    | ಡಾ. ಎಸ್.ಬಿ. ಬೊಮ್ಮನಹಳ್ಳಿ ಜಿಲ್ಲಾಧಿಕಾರಿ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts