ಉಡ್ತಾ ಗ್ರೆನೇಡ್​ಗೆ ಬೆಚ್ಚಿದ ಪಂಜಾಬ್

ಅಮೃತಸರ: ಪಾಕಿಸ್ತಾನಿ ಉಗ್ರರ ದಾಳಿ ಸಾಧ್ಯತೆ ಕುರಿತು ಬೇಹುಗಾರಿಕೆ ದಳ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪಂಜಾಬ್​ನಲ್ಲಿ ಭಾನುವಾರ ಶಂಕಿತ ಉಗ್ರರ ದಾಳಿ ನಡೆದಿದೆ. ಅಮೃತಸರ ಬಳಿಯ ರಾಜಾಸಾನ್ಸಿ ಎಂಬ ಗ್ರಾಮದಲ್ಲಿ ನಡೆಯುತ್ತಿದ್ದ ಧಾರ್ವಿುಕ ಕಾರ್ಯಕ್ರಮ ವನ್ನು ಗುರಿಯಾಗಿಸಿ ಕೊಂಡು ದುಷ್ಕರ್ವಿುಗಳು ನಡೆಸಿದ ಗ್ರೆನೇಡ್ ದಾಳಿಗೆ ಮೂವರು ಬಲಿಯಾಗಿದ್ದು, 22ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮೇಲ್ನೋಟಕ್ಕೆ ಕೃತ್ಯದ ಹಿಂದೆ ಉಗ್ರರ ಕೈವಾಡವಿರುವುದು ಸ್ಪಷ್ಟವಾಗಿರುವುದರಿಂದ ದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಧಾರ್ವಿುಕ ಕಾರ್ಯಕ್ರಮ ಆಯೋಜನೆಯಾಗಿದ್ದ ರಾಜಸ್ಸಾನಿಯ ನಿರಂಕಾರಿ ಭವನಕ್ಕೆ 2-3 ಬೈಕ್​ಗಳಲ್ಲಿ ಬಂದ ದುಷ್ಕರ್ವಿುಗಳು ನೋಡ ನೋಡುತ್ತಿದ್ದಂತೆ ಗ್ರೆನೇಡ್ ಎಸೆದಿದ್ದಾರೆ. ಕೆಲವರು ಈ ದುಷ್ಕರ್ವಿುಗಳನ್ನು ಬೆನ್ನಟ್ಟಿದರಾದರೂ ಯಾರಕೈಗೂ  ಸಿಗದೆ ಪರಾರಿಯಾಗಿದ್ದಾರೆ. ನಿರಂಕಾರಿ ಪಂಗಡದವರು ನಡೆಸುತ್ತಿದ್ದ ಧಾರ್ವಿುಕ ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

5 ಲಕ್ಷ ರೂ. ಪರಿಹಾರ: ಗ್ರ್ರೆನೇಡ್ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಸಾವನ್ನಪ್ಪಿದ ಮೂವರ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಮೂಸಾ ಕೈವಾಡ?

ಮೇಲ್ನೋಟಕ್ಕೆ ದಾಳಿ ಹಿಂದೆ ಪಾಕ್ ಮೂಲದ ಉಗ್ರರ ಕೈವಾಡವಿರುವ ಶಂಕೆ ಇದೆ ಎಂದು ಪಂಜಾಬ್ ಡಿಜಿಪಿ ಸುರೇಶ್ ಅರೋರಾ ಹೇಳಿದ್ದಾರೆ. ಉಗ್ರರು ಅಕ್ರಮವಾಗಿ ಒಳನುಸುಳಿರುವ ಸಾಧ್ಯತೆ ಬಗ್ಗೆ ಬೇಹುಗಾರಿಕಾ ದಳದಿಂದ ಎರಡು ದಿನಗಳ ಹಿಂದಷ್ಟೇ ಸೂಚನೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಟ್ಟಾರಿ-ವಾಘಾ ಗಡಿ ಮತ್ತು ಅಮೃತಸರ ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಅನ್ಸರ್ ಘಜ್ವಾತ್-ಉಲ್-ಹಿಂದ್ ಸಂಘಟನೆಯ ಮುಖ್ಯಸ್ಥ ಜಾಕಿರ್ ಮೂಸಾ ರಾಜ್ಯದಲ್ಲಿ ಕಾಣಿಸಿಕೊಂಡಿದ್ದಾನೆಂದು ಪಂಜಾಬ್ ಪೊಲೀಸರು 2 ದಿನದ ಹಿಂದೆ ಹೇಳಿದ್ದರು. ಪಾಕ್ ಮೂಲದ ಜೈಷ್-ಎ -ಮೊಹಮ್ಮದ್ ಸಂಘಟನೆಯ ಏಳು ಉಗ್ರರು ಮೂಸಾ ಜತೆಗೆ ಫಿರೋಜ್​ಪುರ್​ನಲ್ಲಿ ಕಾಣಿಸಿಕೊಂಡಿದ್ದರು ಎಂಬ ಮಾಹಿತಿ ಇದೆ.