ಪಾದಚಾರಿ ಮೇಲ್ಸೇತುವೆ ಕುಸಿದು ಐವರು ಸಾವು, ಹಲವರಿಗೆ ಗಾಯ

ಮುಂಬೈ: ಪಾದಚಾರಿ ಮೇಲ್ಸೇತುವೆ ಕುಸಿದು ಐವರು ಮೃತಪಟ್ಟು, 34 ಜನರು ಗಾಯಗೊಂಡಿರುವ ಘಟನೆ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಮುಂಬೈನ ಅತಿ ಹೆಚ್ಚು ಜನಜಂಗುಳಿ ಇರುವ ನಿಲ್ದಾಣಗಳಲ್ಲಿ ಒಂದಾದ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ನಲ್ಲಿ ಇಂದು ಸಂಜೆ ಸೇತುವೆ ಕುಸಿದಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಟೈಮ್ಸ್ ಆಫ್ ಇಂಡಿಯಾ ಕಟ್ಟಡದ ಬಳಿ ಬಿಟಿ ಲೇನ್‌ನೊಂದಿಗೆ ಸಿಎಸ್‌ಟಿ ಪ್ಲಾಟ್‌ಫಾರ್ಮ್‌ 1ರ ಉತ್ತರ ತುದಿಗೆ ಸಂಪರ್ಕಿಸುವ ಪಾದಚಾರಿ ಮೇಲ್ಸೇತುವೆ ಕುಸಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯಕ್ಷ ದರ್ಶಿಗಳ ಪ್ರಕಾರ, ಸೇತುವೆಯನ್ನು ಇಂದು ಮುಂಜಾನೆ ರಿಪೇರಿ ಮಾಡಲಾಗುತ್ತಿದ್ದರೂ ಇದುವರೆಗೂ ಅದನ್ನು ಬಳಸಲಾಗುತ್ತಿತ್ತು ಎಂದು ಹೇಳಿದ್ದಾರೆ.

ಸ್ಥಳದಲ್ಲಿ ಅತಿಹೆಚ್ಚು ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ವಾಹನ ಸವಾರರು ಬದಲಿ ಮಾರ್ಗವನ್ನು ಬಳಸುವಂತೆ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. (ಏಜೆನ್ಸೀಸ್)