ಅಂತರಿಕ್ಷಕ್ಕೆ ಮೂವರು ಗಗನಯಾತ್ರಿಗಳನ್ನು ಕಳುಹಿಸುವ ‘ಗಗನ ಯಾನ’ಕ್ಕೆ ಸಂಪುಟ ಅಸ್ತು

ಯೋಜನೆಗೆ 10 ಸಾವಿರ ಕೋಟಿ ರೂ. ಒದಗಿಸಲು ಕೇಂದ್ರದ ಒಪ್ಪಿಗೆ

ನವದೆಹಲಿ: ಅಂತರಿಕ್ಷದಲ್ಲಿ ಏಳು ದಿನಗಳ ಕಾಲ ಮೂವರು ಗಗನಯಾತ್ರಿಗಳು ಕೈಗೊಳ್ಳಲಿರುವ ಗಗನಯಾನ ಯೋಜನೆಗೆ ಭಾರತೀಯ ಸರ್ಕಾರ ಶುಕ್ರವಾರ ಸಂಪುಟ ಅನುಮೋದನೆ ನೀಡಿದ್ದು, ಇದಕ್ಕಾಗಿ ಹತ್ತು ಸಾವಿರ ಕೋಟಿ ರೂ.ಗಳನ್ನು ಒದಗಿಸಲು ನಿರ್ಧರಿಸಿದೆ.

ಮೂವರು ಗಗನಯಾತ್ರಿಗಳುನ್ನು ಅಂತರಿಕ್ಷಕ್ಕೆ ಒಯ್ಯುವ ಈ ಐತಿಹಾಸಿಕ ಕ್ಷಣ 2022ಕ್ಕೆ ಸಾಕಾರಗೊಳ್ಳಲಿದೆ ಎಂದು ಕೇಂದ್ರ ಕಾನೂನು ಮಂತ್ರಿ ರವಿಶಂಕರ್​ ಪ್ರಸಾದ್​ ಶುಕ್ರವಾರ ಘೋಷಿಸಿದ್ದಾರೆ.

ಭಾರತದ ಈ ಮಹತ್ವಾಕಾಂಕ್ಷಿ ಯೋಜನೆಗೆ ‘ಗಗನಯಾನ’ ಎಂದು ಹೆಸರಿಡಲಾಗಿದೆ. ಈ ಮೂಲಕ ನಭಕ್ಕೆ ಮಾನವರನ್ನು ಕಳುಹಿಸಿದ ನಾಲ್ಕನೇ ದೇಶ ಎಂಬ ಖ್ಯಾತಿಗೆ ಭಾರತ ಪಾತ್ರವಾಗಲಿದೆ.

ಕಳೆದ ಸ್ವಾತಂತ್ರ್ಯೋತ್ಸವದ ದಿನ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ 2022ಕ್ಕೆ ಅಂತರಿಕ್ಷಕ್ಕೆ ಗಗನಯಾತ್ರಿಗಳನ್ನು ಕಳುಹಿಸಲಿದೆ ಎಂದು ಘೋಷಿಸಿದ್ದರು.

ಇನ್ನೂ ಈ ಕುರಿತು ಪರತಿಕ್ರಿಯಿಸಿರುವ ಇಸ್ರೋ ಅಧ್ಯಕ್ಷ ಡಾ. ಕೆ ಶಿವನ್​, ” ಇಸ್ರೋ ಈಗಾಗಲೇ ಬಿಡುವಿಲ್ಲದ ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ. ಆದರೆ, 2022ಕ್ಕೆ ಈ ಯೋಜನೆಯನ್ನು ಸಾಕಾರಗೊಳಿಸಲಾಗುವುದು,” ಎಂದು ಹೇಳಿದ್ದಾರೆ.

ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಲುವಾಗಿ ಜಿಯೋ ಸಿಂಕ್ರೋನಸ್​ ಉಪಗ್ರಹ ಉಡ್ಡಾಯನ ವಾಹನವನ್ನು ಸಿದ್ಧಪಡಿಸಲಿದೆ.